ನವದೆಹಲಿ, ಡಿ.02 (DaijiworldNews/PY): "ಯುವಜನತೆಗೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಭಾರತದ ಯುವಕರು ಇನ್ನು ಎಷ್ಟು ದಿನ ತಾಳ್ಮೆಯಿಂದ ಇರಬೇಕು" ಎಂದು ಕೇಂದ್ರ ಸರ್ಕಾರದ ವಿರುದ್ದ ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿಕಾರಿದ್ಧಾರೆ.

"ಮೊದಲೇ ಯುವಕರಿಗೆ ಸರ್ಕಾರಿ ಕೆಲಸ ಸಿಗುತ್ತಿಲ್ಲ. ಅವಕಾಶ ಬಂದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುತ್ತದೆ. ಪರೀಕ್ಷೆ ಬರೆದಲ್ಲಿ ವರ್ಷಗಟ್ಟಲೇ ಫಲಿತಾಂಶವೇ ಬರುವುದಿಲ್ಲ. 1.25 ಕೋಟಿ ಯುವಕರು ರೈಲ್ವೆ ಗ್ರೂಪ್ ಡಿ ಪರೀಕ್ಷೆಗಾಗಿ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಸೇನಾ ನೇಮಕಾತಿಯೂ ಸಹ ತಡವಾಗಿದೆ. ಇನ್ನು ಎಷ್ಟು ದಿನ ದೇಶದ ಯುವಕರು ತಾಳ್ಮೆಯಿಂದ" ಇರಬೇಕು ಎಂದು ಪ್ರಶ್ನಿಸಿದ್ಧಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆ ಭಾನುವಾರ ನಡೆಯಬೇಕಿದ್ದ ಉತ್ತರಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು.
ಈ ವಿಷಯವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ವರುಣ್ ಗಾಂಧಿ ಅವರು, "ಪ್ರಶ್ನೆ ಪತ್ರಿಕೆಯ ಸೋರಿಕೆಯ ಕಾರಣದಿಂದ ಲಕ್ಷಾಂತರ ಯುವಕರ ಭವಿಷ್ಯದೊಂದಿಗೆ ಆಟವಾಡಿದಂತಾಗಿದೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ರಾಜಕೀಯ ಪ್ರಭಾವಿ ವ್ಯಕ್ತಿಗಳ ಒಡೆತನದಲ್ಲಿವೆ. ಶಿಕ್ಷಣ ಮಾಫಿಯಾದಲ್ಲಿ ಭಾಗಿಯಾಗಿರುವವರ ವಿರುದ್ದ ಸರ್ಕಾರ ಎಂದು ಕಠಿಣ ಕ್ರಮ ಕೈಗೊಳ್ಳುತ್ತದೆ?" ಎಂದು ಕೇಳಿದ್ದಾರೆ.
ಅಕ್ಟೋಬರ್ನಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿಯ 80 ಸದಸ್ಯರ ಪಟ್ಟಿಯಿಂದ ಸಂಸದ ವರುಣ್ ಗಾಂಧಿ ಹಾಗೂ ಮಾಜಿ ಸಚಿವೆ ಮೇನಕಾ ಗಾಂಧಿ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರನ್ನು ಹೊರಗಿಡಲಾಗಿತ್ತು.