ಜೈಪುರ, ಡಿ.12 (DaijiworldNews/PY): "ಮಹಾತ್ಮ ಗಾಂಧಿ ಹಿಂದೂ, ಗೋಡ್ಸೆ ಹಿಂದುತ್ವವಾದಿ. ಭಾರತ ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಜೈಪುರದಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ದೇಶದಲ್ಲಿ ಎರಡು ಪದಗಳ ನಡುವೆ ಘರ್ಷಣೆ ನಡೆಯುತ್ತಿದೆ. ಒಂದು ಪದ ಹಿಂದೂ ಮತ್ತು ಇನ್ನೊಂದು ಹಿಂದುತ್ವ. ಹಿಂದು ಹಾಗೂ ಹಿಂದುತ್ವವಾದದ ಮಧ್ಯೆ ವ್ಯತ್ಯಾಸಗಳಿವೆ. ನಾನು ಹಿಂದು. ಆದರೆ, ಹಿಂದುತ್ವವಾದಿಯಲ್ಲ" ಎಂದಿದ್ದಾರೆ.
"ದೇಶದ ಮುಂದೆ ಏನಿದು ಹೋರಾಟ? ಯಾರ ನಡುವೆ? ಯಾವ ಸಿದ್ದಾಂತಗಳ ನಡುವೆ ಹೋರಾಟ?" ಎಂದು ಪ್ರಶ್ನಿಸಿದ್ದಾರೆ.
"ಯಾವುದೇ ಎರಡು ಆತ್ಮಗಳು ಒಂದೇ ಆತ್ಮವನ್ನು ಹೊಂದಲು ಆಗುವುದಿಲ್ಲ. ಹಾಗೇ, ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ. ಪ್ರತಿಯೊಂದು ಪದಕ್ಕೂ ವಿಭಿನ್ನವಾದ ಅರ್ಥವಿದೆ. ಇಂದು ದೇಶದ ರಾಜಕೀಯದಲ್ಲಿ ಎರಡು ಪದಗಳ ಘರ್ಷಣೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.
"ಅಧಿಕಾರ ಪಡೆಯುವುದಕ್ಕಾಗಿ ಹಿಂದುತ್ವವಾದಿಗಳು ತಮ್ಮ ಇಡೀ ಜೀವನವನ್ನು ಸವೆಸುತ್ತಾರೆ. ಅಧಿಕಾರವಷ್ಟೇ ಅವರಿಗೆ ಮುಖ್ಯ. ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ" ಎಂದಿದ್ದಾರೆ.