ನವದೆಹಲಿ, ಡಿ.17 (Daijiworld/PY): ಭಾರತ ಹಿಂದೂಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ದ ಆರ್ಎಸ್ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದು, "ರಾಹುಲ್ ಗಾಂಧಿ ಅವರ ಜ್ಞಾನ ಹಾಗೂ ಆ ವಿಷಯದ ಕುರಿತು ಅವರ ತಿಳುವಳಿಕೆ ಕಡಿಮೆ ಇದೆ" ಎಂದು ಹೇಳಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಹಿಂದೂ, ಹಿಂದುತ್ವವಿಲ್ಲದೇ ಜೀವಂತವಾಗಿರಲು ಆಗುವುದಿಲ್ಲ. ಹಿಂದುತ್ವ ಹಾಗೂ ಹಿಂದೂ ಪದಗಳ ಮಧ್ಯೆ ವ್ಯತ್ಯಾಸವನ್ನು ಎಳೆದು ತರುವ ಮುಖೇನ ಆತ್ಮದಿಂದ ಅದರ ದೇಹವನ್ನು ಬೇರ್ಪಡಿಸುತ್ತಿದ್ದಾರೆ. ಈ ಬಗ್ಗೆ ಅವರು ಅತ್ಯಂತ ಕಳಪೆ ಜ್ಞಾನ ಹಾಗೂ ಪರಿಕಲ್ಪನೆಯನ್ನು ಹೊಂದಿದ್ದಾರೆ" ಎಂದಿದ್ದಾರೆ.
"ರಾಹುಲ್ ಗಾಂಧಿ ಅವರಿಗೆ ಒಳ್ಳೆಯ ಬುದ್ಧಿ ಬರಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ರಾಜಸ್ತಾನದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, "ಭಾರತ ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ. ನಾನು ಹಿಂದೂ, ಹಿಂದುತ್ವವಾದಿಯಲ್ಲ. ಹಿಂದೂವಿನ ಹೃದಯವು ಪ್ರೀತಿಯಿಂದ ತುಂಬಿರುತ್ತದೆ. ಹಿಂದುತ್ವವಾದಿಯ ಹೃದಯದಲ್ಲಿ ಭೀತಿ ಹಾಗೂ ದ್ವೇಷ ಇರುತ್ತದೆ" ಎಂದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಕಾರಿಡಾರ್ಗೆ ಭೇಟಿ ನೀಡಿದ್ದ ಬಗ್ಗೆ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ ಅವರು, "ತಮ್ಮ ಹೇಳಿಕೆಗಳಿಂದ ಅವರು ದೇಶವನ್ನು ಅನಾಗರಿಕವನ್ನಾಗಿ ಮಾಡಬಾರದು" ಎಂದಿದ್ದಾರೆ.