ಬೆಳಗಾವಿ, ಡಿ.18 (Daijiworld/PY): ಅನಗೋಳದ ಕನಕದಾಸ ಕಾಲೊನಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ ಹಿನ್ನೆಲೆ ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬೆಳಗಾವಿ ತಾಲೂಕಿನಾದ್ಯಂತ ನಿಷೇಧಾಜ್ಞೆ ಅನ್ವಯವಾಗಲಿದ್ದು, ಇಂದು ಬೆಳಗ್ಗೆ 8ರಿಂದ ನಾಳೆ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಸಂದರ್ಭ ಗುಂಪುಗುಂಪಾಗಿ ಸೇರುವುದನ್ನು ಸಹ ನಿಷೇಧಿಸಲಾಗಿದೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಕೆ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, "ಬೆಳಗಾವಿಯ ಪುಂಡರ ಗಲಾಟೆ ನನ್ನ ಗಮನಕ್ಕೆ ಬಂದಿದೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೆ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಈ ರೀತಿಯಾದ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಬೆಳಗ್ಗಿನ ಜಾವ 3ರ ಸುಮಾರಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಮುಖದ ಭಾಗವನ್ನು ವಿರೂಪಗೊಳಿಸಿದ್ದು, ಪ್ರತಿಮೆಯಲ್ಲಿದ್ದ ಖಡ್ಗವನ್ನು ಕಿತ್ತು ಹಾಕಿದ್ಧಾರೆ ಎಂದು ತಿಳಿದುಬಂದಿದೆ.
ಗಲಾಟೆಯಲ್ಲಿ ಕರ್ನಾಟಕ ಸರ್ಕಾರದ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಮೂರು ಕಾಲೋನಿಯಲ್ಲಿ 20ಕ್ಕೂ ಹೆಚ್ಚು ಕಾರುಗಳ ಗಾಜು ಪುಡಿಯಾಗಿದೆ. ಆರು ಸರ್ಕಾರಿ ಕಾರುಗಳು ಹಾಗೂ ಆರು ಪೊಲೀಸ್ ಇಲಾಖೆ ಜೀಪುಗಳು, ಸಿನಿಮಾ ನೋಡಲು ಬಂದಿದ್ದವರ ಎರಡು ಕಾರುಗಳಿಗೆ ಹಾನಿಯಾಗಿದೆ.
ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೂ ಕಲ್ಲೂ ತೂರಾಟವಾಗಿದೆ. ಇನ್ನು ಪುಂಡರು ಕಲ್ಲು ತೂರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 27 ಆರೋಪಿಗಳನ್ನು ಬಂಧಿಸಿದ್ದಾರೆ.