ನವದೆಹಲಿ, ಮೇ 31 (DaijiworldNews/DB): 2016ರಲ್ಲಿ ಒಟ್ಟಾರೆ 18 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿತ್ತು.ಆದರೆ ಪ್ರಸ್ತುತ 31 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿದೆ. ಹಾಗಾದರೆ ಕ್ಯಾಶ್ಲೆಸ್ ಇಂಡಿಯಾ, ಡಿಜಿಟಲ್ ಇಂಡಿಯಾದ ಪರಿಸ್ಥಿತಿ ಏನಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ಅಧಿಕ ಮುಖಬೆಲೆಯ ನೋಟು ರದ್ದತಿ ಮಾಡಿದ ಸರ್ವಾಧಿಕಾರಿಯ ನಿರ್ಧಾರದಿಂದ ಜನ ಹಲವಾರು ರೀತಿಯ ತೊಂದರೆ ಅನುಭವಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೋಟು ರದ್ದತಿಯಿಂದಾಗಿ ಜನ ಪಡಬಾರದ ತೊಂದರೆ ಅನುಭವಿಸಬೇಕಾಯಿತು. ಸರದಿ ಸಾಲಿನಲ್ಲಿ ಬ್ಯಾಂಕಿನ ಮುಂಭಾಗ ಬಿಸಿಲಿನಲ್ಲಿ ನಿಲ್ಲಬೇಕಾಗಿ ಬಂತು. ಆನೋವನ್ನು ಎಂದಿಗೂ ಜನರು ಮರೆಯುವುದಿಲ್ಲ ಎಂದರು.
ತಮ್ಮದೇ ಹಣವನ್ನು ಬ್ಯಾಂಕಿನಿಂದ ಪಡೆಯಲು ಜನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮದುವೆ, ವೈದ್ಯಕೀಯ ಕಾರಣಗಳಿಗಾಗಿ ಹಣವಿಲ್ಲದೆ ನರಕ ಅನುಭವಿಸಿದ ಸಂಕಟ ಹೇಳತೀರದು. ವಯಸ್ಕರು, ಗರ್ಭಿಣಿಯರು, ಮಕ್ಕಳು ಪಟ್ಟ ನೋವು ಅವರಿಗಷ್ಟೆ ಗೊತ್ತು. ಸರತಿ ಸಾಲಿನಲ್ಲಿ ನಿಂತು ಹಲವರು ಮೃತಪಟ್ಟ ಘಟನೆಗಳನ್ನು ಜನಮರೆತಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.