ಬೆಂಗಳೂರು, ಜೂ 13 (DaijiworldNews/DB): ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಕಲಿ ಗಾಂಧಿ ಕುಟುಂಬ ಈಗ ಅನುಕಂಪ ಗಿಟ್ಟಿಸುವ ನಾಟಕವಾಡುತ್ತಿದೆ. ತಾನು ಕಳ್ಳ ಪರರ ನಂಬೆ ಎಂಬ ಧೋರಣೆಯೇ ಕಾಂಗ್ರೆಸ್ ಅಸ್ಮಿತೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸಿದ ಬೆನ್ನಲ್ಲೇ ನವದೆಹಲಿ ಮತ್ತು ಬೆಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, ನಕಲಿ ಗಾಂಧಿ ಮನೆತನದಿಂದ, ನಕಲಿ ಗಾಂಧಿ ಮನೆತನಕ್ಕಾಗಿ, ನಕಲಿ ಗಾಂಧಿ ಮನೆತನಕ್ಕೋಸ್ಕರ, ಇದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ! ತಪ್ಪು ಮಾಡದವರು ಯಾರು ಎಂದು ಒಪ್ಪಿಕೊಂಡು ತನಿಖೆ ಎದುರಿಸುವ ಮುಕ್ತ ಮನಸ್ಸು ನಕಲಿ ಗಾಂಧಿ ಕುಟುಂಬಕ್ಕಿಲ್ಲ. ತಪ್ಪು ಮಾಡದೇ ಇದ್ದರೆ ತನಿಖೆಯ ಅಗ್ನಿ ಪರೀಕ್ಷೆ ಎದುರಿಸಲು ಭಯವೇಕೆ? ಎಂದು ಪ್ರಶ್ನಿಸಿದೆ.
ಅಷ್ಟಕ್ಕೂ ತನಿಖೆ ಬೇಡ ಎನ್ನಲು, ನಕಲಿ ಗಾಂಧಿ ಕುಟುಂಬವನ್ನು ಹೊರಗಿಟ್ಟು ಭಾರತೀಯ ದಂಡ ಸಂಹಿತೆ ರಚಿಸಲಾಗಿದೆಯೇ? ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ನಕಲಿ ಗಾಂಧಿ ಕುಟುಂಬದ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ತಪ್ಪು ಮಾಡದೇ ಇದ್ದರೆ ಭಯವೇಕೆ? ಸಹಾನುಭೂತಿ ಗಿಟ್ಟಿಸುವುದಕ್ಕಾಗಿ ಕಾಂಗ್ರೆಸ್ ಪ್ರತಿಭಟನೆಯ ನಾಟಕ ಹೆಣೆಯುತ್ತಿದೆ. ಇದೊಂದು ಯೋಜಿತ ಸಂಚು ಅಷ್ಟೇ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ದೇಶಕ್ಕಾಗಿ ಮಡಿವ ಸೈನಿಕರ ಪರವಾಗಿ ಒಮ್ಮೆಯೂ ಕಾಂಗ್ರೆಸ್ ದನಿ ಎತ್ತಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಕಾಂಗ್ರೆಸ್ ಬೀದಿಗೆ ಬರಲಿಲ್ಲ. ಆದರೆ ನಕಲಿ ಗಾಂಧಿಗಳಿಗೆ ಇಡಿ ನೊಟೀಸ್ ನೀಡಿದರೆ ಕಾಂಗ್ರೆಸ್ ರಸ್ತೆಗೆ ಬಂದು ನಿಂತಿದೆ. ಇದು ಸಂವಿಧಾನಕ್ಕೆಸಗುತ್ತಿರುವ ಅಪಚಾರವಲ್ಲವೇ? ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಇಡಿ ನೋಟಿಸ್ ಜಾರಿಯಾಗುತ್ತಿದ್ದಂತೆ ದೇಶಾದ್ಯಂತ ಅಶಾಂತಿ ಸೃಷ್ಟಿ ಮಾಡಲಾಗುತ್ತಿದೆ. ಇಡಿ ಕಚೇರಿ ಎದುರು ಪ್ರತಿಭಟನೆಯ ಕರೆಯ ಹಿಂದೆ ದೇಶ ವಿರೋಧಿ ಸಂಚು ಅಡಗಿದೆ ಎಂದು ಬಿಜೆಪಿ ಆಪಾದಿಸಿದೆ.
ಉತ್ತರದ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ಕಾಂಗ್ರೆಸ್ ಕರ್ನಾಟಕಕ್ಕೆ ಆಹ್ವಾನಿಸುತ್ತಿದೆ! ಕೇವಲ ಒಂದು ಇಡಿ ನೋಟಿಸ್ಗಾಗಿ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಡಿ.ಕೆ. ಶಿವಕುಮಾರ್ ಅವರೇ, ನೀವೇನು ಸೊಬಗ ಅಂದುಕೊಂಡಿದ್ದೀರಾ? ಒಂದೂವರೆ ತಿಂಗಳಿಗೂ ಹೆಚ್ಚು ತಿಹಾರ್ ಜೈಲಿನಲ್ಲಿ ಕಂಬಿ ಎಣಿಸಿದ್ದು ನ್ಯಾಷನಲ್ ಹೆರಾಲ್ಡ್ ರೀತಿಯ ಪ್ರಕರಣದಲ್ಲಿಯೇ ಎಂಬುದನ್ನು ಮರೆತಿರಾ? ಎಂದು ಪ್ರಶ್ನಿಸಿದೆ.
ತಮ್ಮ ಪ್ರತಿ ಭಾಷಣದಲ್ಲೂ ಕೆಪಿಸಿಸಿ ಅಧ್ಯಕ್ಷರು 'ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ' ಎಂಬುದನ್ನು ಪ್ರಸ್ತಾಪಿಸುತ್ತಾರೆ. ಅದೇ ಡಿಕೆಶಿ ಇಂದು ದೇಶದ ಸಾಂವಿಧಾನಿಕ ಮಾನ್ಯತೆ ಇರುವ ಸಂಸ್ಥೆ ನಕಲಿ ಗಾಂಧಿ ಕುಟುಂಬಕ್ಕೆ ನೀಡಿದ ನೋಟಿಸ್ಗೆ ನಕಲಿ ಗಾಂಧಿಗಳ ಜಪ ಮಾಡುತ್ತಿರುವುದು ವಿಪರ್ಯಾಸ. ಬಾಲ ಮುದುರಿಕೊಂಡು ಕುಳಿತಿದ್ದ ನಗರ ನಕ್ಸಲರು, ಶಾಂತಿದೂತರು, ಸಿಎಎ ವಿರೋಧಿ ಹೋರಾಟಗಾರರು ಈಗ ಒಮ್ಮೆಲೇ ಎದ್ದು ನಿಂತಿದ್ದಾರೆ. ಇಡಿ ನೋಟೀಸ್ ಬಳಿಕ ಈ ಘಟನೆ ನಡೆಯುತ್ತಿದೆ. ಹಾಗಾದರೆ ಇದು ಕಾಂಗ್ರೆಸ್ ಪ್ರೇರಿತ ರಾಷ್ಟ್ರ ವಿರೋಧಿ ಸಂಚಲ್ಲವೇ? ಮಾತೆತ್ತಿದರೆ ತ್ಯಾಗ-ಬಲಿದಾನದ ಕುಟುಂಬ ಎಂದು ಹೇಳುವ ಕಾಂಗ್ರೆಸ್ ನಾಯಕರೇ, ನಕಲಿ ಗಾಂಧಿಗಳ ವಂಶಸ್ಥರ ಅಕ್ರಮ ಆಸ್ತಿ ದೇಶಸೇವೆಗಾಗಿ ಬರೆದುಕೊಡಲಿ ಎಂದು ಇದೇ ವೇಳೆ ಕಾಂಗ್ರೆಸ್ಗೆ ಬಿಜೆಪಿ ಸವಾಲು ಹಾಕಿದೆ.
ಅಕ್ರಮಿಗಳ ಹಣ ದೇಶ ಸೇವೆಗಾಗಿ ಮೀಸಲಿಟ್ಟಿದ್ದರೆ, ಅಕ್ರಮ ಹಣ ಗಳಿಕೆಯಲ್ಲಿ ಇಡಿ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ನಡೆಸಿದ್ದು ಅಕ್ಷರಶಃ ಮನೆಗಳ್ಳತನ! ಕಾಂಗ್ರೆಸ್ ಪಕ್ಷದ 5000 ಸದಸ್ಯರ ಇಡಗಂಟಿನೊಂದಿಗೆ ಆರಂಭವಾದ ಅಸೋಸಿಯೇಟ್ ಜರ್ನಲ್ ಶೇರುಗಳನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಬಳಿಸಲಾಗಿದೆ. ಸ್ವಂತ ಮನೆಗೆ ಕನ್ನ ಹಾಕುವುದೆಂದರೆ ಇದೇ ಅಲ್ಲವೇ? ಉಪ್ಪು ತಿಂದ ಮೇಲೆ ನೀರು ಕುಡಿಯ ಬೇಕು, ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಬೇಕು. ರಾಹುಲ್ ಗಾಂಧಿ ನೇತೃತ್ವದ ಯಂಗ್ ಇಂಡಿಯಾ ಸಂಸ್ಥೆ ಅಕ್ರಮ ಹಣ ವರ್ಗಾವಣೆ ಮಾಡಿರುವುದಕ್ಕೆ ಜಾರಿ ನಿರ್ದೇಶನಾಲಯದ ಬಳಿ ಸಾಕಷ್ಟು ಸಾಕ್ಷಿಗಳಿವೆ ಎಂದಿದೆ.
ಸತ್ಯ ಅನಾವರಣಗೊಳಿಸುವುದು ಕಾಂಗ್ರೆಸ್ ದೃಷ್ಟಿಯಲ್ಲಿ ಮಾತ್ರ ದ್ವೇಷದ ರಾಜಕಾರಣ! ನಕಲಿ ಗಾಂಧಿ ಕುಟುಂಬದ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ಪಾದಯಾತ್ರೆಯ ನೆನಪಾಗುತ್ತದೆ. ದೇಶದಲ್ಲಿ ಉಗ್ರರ ದಾಳಿಯಾದಾಗ, ರೈತರ ಸರಣಿ ಆತ್ಮಹತ್ಯೆ ನಡೆದಾಗ, ಶಾಂತಿದೂತರು ಕಲ್ಲು ತೂರಾಟ ನಡೆಸಿದಾಗ ಕಾಂಗ್ರೆಸ್ಸಿಗರಿಗೆ ಪಾದಯಾತ್ರೆಯ ನೆನಪಾಗುವುದಿಲ್ಲ ಎಂದಿರುವ ಬಿಜೆಪಿ, ಜನವಿರೋಧಿ ನಿಲುವು ಏಕೆ? ಗಾಂಧಿ ಕುಟುಂಬದ ಪರವಾಗಿ ಭ್ರಷ್ಟಾಧ್ಯಕ್ಷ ಡಿಕೆಶಿ ಮಾಡುವ ಭಾಷಣ "ಕಳ್ಳರು, ಕಳ್ಳರು ಸೇರಿ ಸಂತೆಗೆ ಹೋದಂತೆ" ಇದೆ. ಅಕ್ರಮ ಆಸ್ತಿ ಸಂಪಾದನೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ವ್ಯಕ್ತಿಯೇ ಇಡಿ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವುದು ಗೂಂಡಾಗಿರಿಯಲ್ಲದೇ ಮತ್ತೇನು? ಎಂದು ಪ್ರಶ್ನೆ ಎಸೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕಾನೂನಿಗೆ ಅತೀತರಾದವರಲ್ಲ. ಅವರು ಇಡಿ ವಿಚಾರಣೆ ಎದುರಿಸಿದರೆ ಕೆಪಿಸಿಸಿ ಅಧ್ಯಕ್ಷರು ತಮ್ಮ ಪಟಾಲಂ ಕಟ್ಟಿ ಯಾಕೆ ಇಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕು. ಇದರಿಂದ ಕಳ್ಳನ ಮನಸ್ಸು ಹುಳ್ಳಗೆ ಎಂದು ಸಾಬೀತಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮಗೌರವ ಇಲ್ವೇ? ಎಂದು ಪ್ರಶ್ನಿಸಿದ್ದಾರೆ.