ನವದೆಹಲಿ,ಜ 30 (MSP): ಲೋಕಸಭೆ ಚುನಾವಣೆಯ ಹಿನ್ನಲೆಯಲಿ ಫೆಬ್ರವರಿ 1ರಂದು ಕೇಂದ್ರ ಸರಕಾರ ಮಂಡಿಸಲಿರುವ ಬಜೆಟ್ ಮಧ್ಯಾವಧಿ ಬಜೆಟ್ ಆಗಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ಬುಧವಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಹಣಕಾಸು ಸಚಿವ ಪಿಯೂಶ್ ಗೋಯೆಲ್, ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಫೆಬ್ರವರಿ 1ರಂದು 4 ತಿಂಗಳ ಮಧ್ಯಂತರ ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ . ಈ ಸ್ಪಷ್ಟೀಕರಣದಿಂದಾಗಿ ಪ್ರಧಾನಿ ಮೋದಿ ಅವರ ಸರಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ಈ ಬಗ್ಗೆ ದೆಹಲಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸಚಿವ ಪಿಯೂಶ್ ಗೋಯಲ್ ಈ ಬಜೆಟ್, 2019-20ರ ಮಧ್ಯಾವಧಿ ಬಜೆಟ್ ಎನಿಸಿಕೊಳ್ಳಲಿದೆ ಎಂದು ಹೇಳಿದರು. ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಜನವರಿ 31 ರಿಂದ ಫೆ.13 ರವರೆಗೆ ನಡೆಯಲಿದ್ದು, 31 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ಮಂಡಿಸಲಾಗುವ ಬಜೆಟ್, ಪೂರ್ಣ ಪ್ರಮಾಣದ್ದಾಗಿರದೆ ಅದು ಕೇವಲ ಲೇಖಾನುದಾನ ಮಾತ್ರವೇ ಆಗಿರುತ್ತದೆ. ಇದು ಅಲ್ಲಿಯವರೆಗೆ ಸರಕಾರದ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ ಆಗಿರುತ್ತದೆ. ಮುಂದೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ.