ಅಲಿಗಡ,ಜ 31(MSP): ದೇಶದೆಲ್ಲೆಡೆ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಆಚರಿಸಿದರೆ, ಅಖಿಲ ಭಾರತ ಹಿಂದೂ ಮಹಾಸಭಾ ನಾಯಕರು ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸುವ ಮೂಲಕ ವಿಕೃತಿ ಮೆರೆದಿದ್ದಾರೆ ಎಂದು ವರದಿಯಾಗಿದೆ.
ಗಾಂಧಿ ಅವರ ಪ್ರತಿಕೃತಿಗೆ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ನಕಲಿ ಬಂದೂಕಿನಿಂದ ಗುಂಡಿಕ್ಕಿದ್ದಾರೆ. ಮಹಾತ್ಮ ಗಾಂಧಿ ಹತ್ಯೆಯಾದ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಆದರೆ ದೇಶದ ಇಬ್ಭಾಗಕ್ಕೆ ಮತ್ತು ಪಾಕಿಸ್ತಾನದ ಹುಟ್ಟಿಗೆ ಗಾಂಧಿಯವರೇ ಕಾರಣ ಎಂದು ಆರೋಪಿಸುವ ಹಿಂದೂ ಮಹಾಸಭಾವು ಗಾಂಧಿ ಹತ್ಯೆಯ ದಿನವನ್ನು ಸಂಭ್ರಮದ ದಿನವನ್ನಾಗಿ ಆಚರಿಸುತ್ತಿದೆ.
ಇದೇ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಅಲಿಗಡದಲ್ಲಿ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ನೇತೃತ್ವದಲ್ಲಿ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮಾತ್ರವಲ್ಲದೇ ಪಾಂಡೆ ಅವರು ನಕಲಿ ಪಿಸ್ತೂಲ್ನಿಂದ ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿದರು. ಪ್ರತಿಕೃತಿಯಿಂದ ರಕ್ತವನ್ನು ಹೋಲುವ ದ್ರವ ನೆಲದ ಮೇಲೆ ಹರಿದಿದೆ. ಬಳಿಕ ಕಾರ್ಯಕರ್ತರು ಗೋಡ್ಸೆ ಪರ ಘೋಷಣೆ ಕೂಗಿದರು.
ದಸರಾದಲ್ಲಿ ರಾವಣನ ಪ್ರತಿಕೃತಿಗೆ ಬೆಂಕಿ ಇಡುವಂತೆ, ಗಾಂಧಿ ಪ್ರತಿಕೃತಿಗೆ ಗುಂಡಿಕ್ಕಿ ಗೋಡ್ಸೆ ಗೌರವಾರ್ಥ ‘ಶೌರ್ಯ ದಿವಸ’ ಎಂದು ಆಚರಿಸುವ ಹೊಸ ಸಂಪ್ರದಾಯ ಹುಟ್ಟು ಹಾಕಿರುವುದಾಗಿ ಪೂಜಾ ಹೇಳಿಕೊಂಡಿದ್ದಾರೆ. ಇದರೊಂದಿಗೆ ‘ಗುಂಡು ಹಾರಿಸುವುದು ಬೇಡ. ಬರೀ ಪೋಟೋಗೆ ಪೋಸು ನೀಡಿದ್ರೆ ಸಾಕು’ ಎಂದು ವ್ಯಕ್ತಿಯೊಬ್ಬ ಹೇಳುವ ಧ್ವನಿ ಇರುವ ವಿಡಿಯೊ ವೈರಲ್ ಆಗಿದೆ.