ಬೆಂಗಳೂರು,ಜ 31(MSP): ಫೇಸ್ ಬುಕ್ ನಲ್ಲಿಯೇ ಪರಿಚಯವಾಗಿ ಪ್ರೀತಿ ಹುಟ್ಟಿ, ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದು , ವಿವಾಹವಾಗಿ ಕೊನೆಗೆ ಹೆಂಡತಿಯ ಅತಿಯಾದ ಫೇಸ್ ಬುಕ್ ಮೋಹಕ್ಕೆ ರೋಸಿ ಹೋದ ಪತಿರಾಯನ್ನೊಬ್ಬ ಹೆಂಡತಿಯನ್ನೇ ಕೊಲೆ ಮಾಡಿದ ವಿಚಿತ್ರ ಘಟನೆ ಬಿಡದಿಯಲ್ಲಿ ನಡೆದಿದೆ.
ಬಿಡದಿ ಹೋಬಳಿಯ ಹೆಜ್ಜಾಲ- ಮುತ್ತುರಾಯನಪುರ ರಸ್ತೆಯ ಕುಂಬಳಗೂಡು ಅರಣ್ಯ ಪ್ರದೇಶದ ನೀಲಗಿರಿ ತೋಪಿನಲ್ಲಿ ಮಹಿಳೆ ಹಾಗೂ ಮಗುವೊಂದರ ಮೃತದೇಹಗಳು ಪತ್ತೆಯಾಗಿದ್ದವು. ಈ ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರಿಗೆ ಈ ವಿಚಾರ ಬಹಿರಂಗವಾಗಿದೆ. ತನ್ನ ಪತ್ನಿ ಹಾಗೂ ಮಗುವನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನ ರಾಮನಗರ ಹಾಗೂ ಬಿಡದಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಎಸ್ ಕೆ ರಾಜು( 28 ) ಬಂಧಿತ ಆರೋಪಿ.
ರಾಜು ಜನವರಿ 20ರಂದು ತನ್ನ ಪತ್ನಿ ಸುಷ್ಮಾ( 25 ) ಹಾಗೂ ಮೂರು ತಿಂಗಳ ಗಂಡು ಮಗುವನ್ನ ಕೊಲೆ ಮಾಡಿದ್ದ. ನೀಲಗಿರಿ ತೋಪಿನಲ್ಲಿ ಸುಷ್ಮಾಳನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ. ನಂತರ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದ. ಸುಷ್ಮಾ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸದ್ಯ ಆರೋಪಿ ರಾಜು ಹೆಂಡತಿ, ಮಗುವನ್ನು ಕೊಲೆ ಮಾಡಿದ ಬಗ್ಗೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಸುಷ್ಮಾ ಹಾಗೂ ರಾಜುಗೆ ಫೇಸ್ಬುಕ್ನಲ್ಲಿ ಪರಿಚಯವಾಗಿತ್ತು. ನಂತರ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ನಂತರ ಇವರಿಬ್ಬರು ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಮದುವೆಯಾದ ಬಳಿಕವೂ ಪತ್ನಿ ಸುಷ್ಮಾಳ ಅತಿಯಾದ ಫೇಸ್ಬುಕ್ ಹುಚ್ಚಿಗೆ ಬೇಸತ್ತ ತಾನು ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ