ಕಾರವಾರ,ಜ 31(MSP): ಪ್ರಪಂಚದ ಯಾವ ಲ್ಯಾಬೊರೇಟರಿಯಲ್ಲೂ ಸಿಗದಂಥ "ಹೈಬ್ರಿಡ್ ತಳಿ" ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಟೀಕಿಸಿದ್ದಾರೆ. ಇವರು ಕಾರವಾರದಲ್ಲಿ ಮಾತನಾಡಿ ಅಪ್ಪ ಮುಸಲ್ಮಾನ, ಅಮ್ಮ ಕ್ರಿಶ್ಚಿಯನ್, ಮಗ ಹಿಂದೂ ಅಂತೆ! ಜಗತ್ತಿನಲ್ಲಿ ಇಂಥ ಹೈಬ್ರೀಡ್ ತಳಿ ಬೇರೆಲ್ಲೂ ಸಿಗಲ್ಲ. ಈ ಹೈಬ್ರೀಡ್ ಕಾಂಗ್ರೆಸ್ ಪ್ರಯೋಗಾಲಯದಲ್ಲಿ ಮಾತ್ರ ಸಿಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಆತನಿಗೆ (ರಾಹುಲ್ ಗಾಂಧಿ) ಈ ದೇಶದ ಬಗ್ಗೆ ತಿಳಿದಿಲ್ಲ. ತಮ್ಮ ಧರ್ಮದ ಬಗ್ಗೆ ಯಾವುದೇ ವಿಚಾರ ಗೊತ್ತಿಲ್ಲ. ಇದಲ್ಲದೇ ತಮ್ಮನ್ನು ತಾವು ಬ್ರಾಹ್ಮಣ ಎಂದು ಹೇಳುತ್ತಾರೆ. ಅವರು ಸುಳ್ಳು ಹೇಳುತ್ತಾರೆ . ರಾಹುಲ್ ಯದ್ವಾತದ್ವಾ ಮಾತನಾಡುತ್ತಾರೆ. ಜನ ನಂಬುವಂತೆ ಹೇಳಬೇಕು. ಹಸಿ ಸುಳ್ಳು ಹೇಳಿದರೆ ಹೇಗೆ? ಅವರಿಗೆ ರಫೇಲ್ ಅಂದರೆ ಗೊತ್ತಿಲ್ಲ. ಅದು ಮೂರು ಗಾಲಿ ಸೈಕಲ್ ಅಲ್ಲ. ಅವರಿಗೆ ದೇಶ, ಧರ್ಮ ಪ್ರಜ್ಞೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಚುನಾವಣೆ ನಂತರ ಕೊಲಂಬಿಯಾಕ್ಕೆ ಹೋಗುತ್ತಾರೆ. ಇನ್ನು ಕಾಂಗ್ರೆಸ್ನ ಭದ್ರಪಾಳಯ ಅಮೇಠಿಯಲ್ಲಿ ಒಂದು ಸಿನೆಮಾ ಟಾಕೀಸ್ ಒಂದೊಳ್ಳೆ ಆಸ್ಪತ್ರೆ ಕೂಡ ಇಲ್ಲ. ದೇಶ ಹಿಂದುಳಿದರೆ, ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ಅದು ಕಾಂಗ್ರೆಸ್ನ ಪಾಪ ಫಲ ಎಂದು ಕಿಡಿಕಾರಿದರು.
ಅನಂತ ಕುಮಾರ್ ಹೆಗಡೆ ಪ್ರಚೋದನಾಕಾರಿ ಹೇಳಿಕೆಗಳಿಂದಲೇ ಆಗಾಗ್ಗೆ ಸುದ್ದಿ ಆಗುತ್ತಿದ್ದಾರೆ.ಕೆಲವು ದಿನಗಳ ಹಿಂದೆಯಷ್ಟೇ ಹಿಂದೂ ಯುವತಿಯರನ್ನು ಮುಟ್ಟುವವರ ಕೈ ಕತ್ತರಿಸಬೇಕು ಎಂದು ಹೇಳಿದ್ದರು.