ಶಬರಿಮಲೆ, ಜ 31(SM): ಶಬರಿಮಲೆ ಅಯ್ಯಪ್ಪ ದೇವಾಲಯ ಅಭಿವೃದ್ಧಿಗೆ ಕೇರಳ ಸರ್ಕಾರ ಮುಂದಾಗಿದೆ. 739 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಪ್ರಕಟಿಸಿದೆ.
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಪರ ನಿಂತಿದ್ದ ಕೇರಳ ಸರ್ಕಾರದ ಬಗ್ಗೆ ಕೇರಳದಲ್ಲಿ ವಿರೋಧದ ದನಿಯೂ ಕೇಳಿಬಂದಿತ್ತು. ಅದನ್ನು ಸರಿದೂಗಿಸಲೆಂದು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶಬರಿಮಲೆಯನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ ಎಂದು ಸರ್ಕಾರವು ಹೇಳಿದ್ದು, 739 ಕೋಟಿ ರೂ. ಹಣವನ್ನು ಶಬರಿಮಲೆಯಲ್ಲಿ ಯಾವ ಕಾರಣಕ್ಕೆ ವೆಚ್ಚ ಮಾಡಬೇಕು ಎಂದು ನೀಲನಕ್ಷೆ ಸಹ ತಯಾರಿಸಿದೆ.
ಪಂಪದಲ್ಲಿ 10 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಚರಂಡಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಎರುಮಲೈ ಮತ್ತು ನಿರಕ್ಕುಲ್ನಲ್ಲಿ 147.75 ಕೋಟಿ ರೂ. ವೆಚ್ಚದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ. ಶಬರಿಮಲೆಯ ರಸ್ತೆಗಳಿಗೆ 200 ಕೋಟಿ ಮೀಸಲಿಡಲಾಗಿದೆ.
ತಿರುವಾಂಕೂರ್ ದೇವಸ್ವಂ ಬೋರ್ಡ್ಗೆ 100 ಕೋಟಿ ರೂ. ಅನುದಾನ ನೀಡಲು ನಿಶ್ಚಯಿಸಲಾಗಿದೆ. ಕೊಚ್ಚಿ, ಮಲಬಾರ್ ದೇವಸ್ವಂ ಬೋರ್ಡ್ಗೆ 35 ಕೋಟಿ ರೂ. ನೀಡಲಾಗುವುದು ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.