ನವದೆಹಲಿ, ಜ 31(SM): ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಸರ್ಕಾರ, ತನ್ನ ಜನಪರ ಯೋಜನೆಯನ್ನು ವಿಸ್ತರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಿಹಿ ಸುದ್ದಿಯೊಂದನ್ನು ನೀಡೋದಕ್ಕೆ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಗೃಹಬಳಕೆ ಇಂಧನಗಳ ಸಬ್ಸಿಡಿಯನ್ನು ವಿಸ್ತರಣೆ ಮಾಡುವ ಸಾಧ್ಯತೆ ಕಂಡು ಬಂದಿದೆ. ಇದರ ಬೆನ್ನಲ್ಲೇ ಗುರುವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ಸಬ್ಸಿಡಿಯುಳ್ಳ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು ಕಡಿಮೆಗೊಳಿಸಲಾಗಿದೆ.
14.2 ಕೆಜಿ ಸಬ್ಸಿಡಿಯುಳ್ಳ ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ ಮೇಲೆ 1.46 ರೂಪಾಯಿ ಕಡಿಮೆಗೊಳಿಸಲಾಗಿದೆ. ಜೂನ್ ತಿಂಗಳಿನಿಂದ ಡಿಸೆಂಬರ್ವರೆಗೂ ಸತತ ಆರು ಬಾರಿ ದರ ಏರಿಕೆಯಾಗಿತ್ತು. ಇದರಿಂದ ಗ್ರಾಹಕರು ಕಂಗಾಲಾಗಿದ್ದರು. ಈಗ ಬೆಲೆ ಇಳಿಕೆಯಿಂದ ತುಸು ನಿಟ್ಟುಸಿರು ಬಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ದರ ಕುಸಿತದಿಂದ ಅಮೆರಿಕನ್ ಡಾಲರ್ ಎದುರು ರೂಪಾಯಿ ವಿನಿಮಯ ದರ ಬಲಗೊಂಡ ಕಾರಣ ಎಲ್ ಪಿಜಿ ದರ ಇಳಿಕೆಯಾಗಿದೆ ಎಂದು ಐಓಸಿ ತಿಳಿಸಿದೆ. ಡಿಸೆಂಬರ್ 1ರಂದು ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 133 ರೂ.ನಷ್ಟು ಇಳಿಕೆಯಾಗಿತ್ತು. ಸಬ್ಸಿಡಿಯುಳ್ಳ ಎಲ್ ಪಿಜಿ ಬೆಲೆ 6.52ರಷ್ಟು ಇಳಿಕೆಯಾಗಿತ್ತು. ಜನವರಿ 01ರಂದು 5.91 ರೂ. ಕಡಿಮೆಯಾಗಿತ್ತು.