ನವದೆಹಲಿ,ಫೆ 01 (MSP): ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹಿಂದಿ, ಹಿಂದು, ಹಿಂದುತ್ವ ಕುರಿತಾಗಿ ಮಾಡಿರುವ ವಿವಾದಿತ ಟ್ವೀಟ್ ಬಿಜೆಪಿಯ ಆಕ್ರೋಶಕ್ಕೆ ತುತ್ತಾಗಿದೆ. ಶಶಿ ತರೂರ್ ಅವರು ಗುರುವಾರ ಮಾಡಿದ ವಿವಾದಿತ ಟ್ವೀಟ್ನಲ್ಲಿ "ಹಿಂದಿ, ಹಿಂದು, ಹಿಂದುತ್ವದ ಸಿದ್ಧಾಂತವು ದೇಶವನ್ನು ವಿಭಜಿಸುವಂತಿದೆ. ನಮಗೆ ಬೇಕಿರುವುದು ಏಕತೆ ಮತ್ತು ಏಕರೂಪತೆ' ಎಂದು ಹೇಳಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯೂ, 'ಕಾಂಗ್ರೆಸ್ ಮತ್ತು ಅದರ ನಾಯಕರು ಹಿಂದುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಭಾರತೀಯ ಜನತಾ ಪಕ್ಷ "ಭಾರತದ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್, ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ನೀಚತನದಿಂದಲೇ ನೋಡುವ ತನ್ನ ಕುತಂತ್ರದ ಭಾಗವಾಗಿ ಹಿಂದು ಧರ್ಮವನ್ನು ಅವಮಾನಿಸುತ್ತಿದೆ; ಇದರಿಂದ ಗಂಭೀರ ಪರಿಣಾಮಗಳಾದಿತು ' ಎಂಬ ಎಚ್ಚರಿಕೆಯನ್ನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಗೆ ನೀಡಿದೆ.
ಇದಲ್ಲದೇ ಇದಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ,ತರೂರ್ ಅವರ ಟ್ವೀಟ್ ತುಂಬ ಆಕ್ಷೇಪಾರ್ಹವಾಗಿದೆ. ನಾವು ಅವರ ಈ ಟೀಕೆಯನ್ನು ಕಾಂಗ್ರೆಸ್ ಪಕ್ಷದ ಟೀಕೆ ಎಂದೇ ಪರಿಗಣಿಸುತ್ತೇವೆ. ಏಕೆಂದರೆ ಶಶಿ ತರೂರ್ ಮೇಲೆ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಎಲ್ಲಿಲ್ಲದ ಪ್ರೀತಿ. ತರೂರ್ ಏನನ್ನು ಹೇಳುತ್ತಾರೋ ಅದನ್ನು ಕಾಂಗ್ರೆಸ್ ಕೇಳುತ್ತದೆ" ಎಂದು ಹೇಳಿದ್ದಾರೆ.