ಬೆಂಗಳೂರು,ಫೆ 01 (MSP): ಇಲ್ಲಿನ ಎಚ್ಎಎಲ್ ಏರ್ ಪೋರ್ಟ್ ಬಳಿ ಯುದ್ಧ ವಿಮಾನವೊಂದು ಪತನವಾಗಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಫೆ.1 ರ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಅತಿಯಾದ ಮಂಜು ಮುಸುಕಿದ ವಾತಾವರಣ ಈ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. .ಮೃತ ಪೈಲಟ್ ಗಳನ್ನು ಸ್ಕಾಡ್ರನ್ ಲೀಡರ್ ಗಳಾದ ಸಿದ್ಧಾರ್ಥ್ ನೇಗಿ ಮತ್ತು ಅಬ್ರಾಲ್ ಎಂದು ಗುರುತಿಸಲಾಗಿದೆ.
ಭಾರತೀಯ ವಾಯು ಸೇನೆಯ ತರಬೇತಿ ಲಘು ಯುದ್ಧ ವಿಮಾನ ಮಿರಾಜ್ 2000 ಪತನವಾಗಿದ್ದು, ಯುದ್ದವಿಮಾನದೊಳಗಿದ್ದ ಇಬ್ಬರು ಟ್ರೈನಿ ಪೈಲಟ್ ಗಳಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಗಂಬೀರ ಗಾಯಗೊಂಡ ಇನ್ನೊರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಮಿರಾಜ್ 2000 ಭಾರೀ ಸ್ಫೋಟಗೊಂಡು ಬಿದ್ದಿದೆ. ಪರಿಣಾಮ ದಟ್ಟವಾದ ಹೊಗೆ ಅವರಿಸಿಕೊಂಡಿದೆ. ಇದರಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ. ಸ್ಥಳಕ್ಕೆ ಎಚ್ ಎಎಲ್ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿಶಾಮಕ ದಳದ ಎರಡು ವಾಹನಗಳೂ ಸ್ಥಳಕ್ಕೆ ದೌಡಾಯಿಸಿ ಯುದ್ದ ವಿಮಾನಕ್ಕೆ ಹತ್ತಿಕೊಂಡಿದ್ದ ಬೆಂಕಿ ಆರಿಸಿದೆ.