ಬೆಂಗಳೂರು, ಫೆ02(SS): ಭೂಗತ ಪಾತಕಿ ರವಿ ಪೂಜಾರಿಯನ್ನು ಸೆನೆಗಲ್ನಲ್ಲಿ ಬಂಧಿಸುವಲ್ಲಿ ಸಮ್ಮಿಶ್ರ ಸರ್ಕಾರದ ಪಾತ್ರ ಮಹತ್ವದ್ದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ರವಿ ಪೂಜಾರಿಯನ್ನು ಬಂಧಿಸುವಲ್ಲಿ ಸರ್ಕಾರ ರಚನೆ ಆದ ಆರಂಭದಲ್ಲೇ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರಲ್ಲಿ ರಾಜ್ಯ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಹಾಗೂ ಭಾರತದ ವಿದೇಶಾಂಗ ಇಲಾಖೆ ಪ್ರತಿನಿಧಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇದು ನಮ್ಮ ಯಶಸ್ಸು ಎಂದು ತಿಳಿಸಿದ್ದಾರೆ.
ರವಿ ಪೂಜಾರಿ ದೂರವಾಣಿ ಮೂಲಕ ಉದ್ಯಮಿಗಳಿಗೆ ಹಾಗೂ ಗಣ್ಯರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿದ್ದ. ಇದರಲ್ಲಿ 2006 ರಿಂದಲೇ ನಮಗೇ ಕೃತ್ಯ ಎಸಗುವ ಬಗ್ಗೆ ಮಾಹಿತಿ ಲಭಿಸಿತ್ತು. ಆದ್ದರಿಂದ ಸರ್ಕಾರ ರಚನೆಯಾದ ಕೂಡಲೇ ಪೊಲೀಸರಿಗೆ ಕ್ರಮಕೈಗೊಳ್ಳಲು ಸೂಚಿಸಿದೆ. ಕೇಂದ್ರದ ಸಹಕಾರ ಪಡೆದು ಹೆಚ್ಚಿನ ಮಾಹಿತಿ ಕಲೆ ಹಾಕಲಾಯಿತು. ಫೋನ್ ಕರೆ ಮಾಹಿತಿ ಮೇರೆಗೆ ಆತ ಸೆನೆಗಲ್ನಲ್ಲಿದ್ದಾನೆ ಎಂಬ ಮಾಹಿತಿ ಲಭಿಸಿತ್ತು. ಆ ಬಳಿಕ ಅಲ್ಲಿನ ಸರ್ಕಾರದೊಂದಿಗೆ ಉತ್ತಮ ಸಂಪರ್ಕ ಏರ್ಪಡಿಸಿ ಆತನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಭೂಗತ ಪಾತಕಿ ರವಿ ಪೂಜಾರಿ ಬಂಧನ ವಿಚಾರದಲ್ಲಿ ಯಾವುದೇ ತಪ್ಪು ಮಾಹಿತಿ ಹೋಗುವುದು ಬೇಡ. ಆತ ಸೆನೆಗಲ್ನಲ್ಲಿ ಡಿ.31ರಂದು ಕ್ರಿಕೆಟ್ ಪಂದ್ಯಗಳನ್ನ ಏರ್ಪಡಿಸುವ ಬಗ್ಗೆ ಫೋಟೋ ಹಾಗೂ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ನಮ್ಮಲಿನ ಮಾಹಿತಿಯನ್ನು ಅಲ್ಲಿನ ಪೊಲೀಸರಿಗೆ ನೀಡಿದ್ದೇವು. ಆ ಬಳಿಕ ಜನವರಿ 19 ರಂದೇ ರವಿ ಪೂಜಾರಿಯ ಬಂಧನವಾಗಿದೆ. ಅಲ್ಲದೇ ಆತನನ್ನು ಭಾರತ ವಶಕ್ಕೆ ನೀಡಲು ಬೇಕಾದ ಕಾನೂನು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.