ದಾವಣಗೆರೆ,ಫೆ 03 (MSP): ಇಬ್ಬರೂ ಐಎಎಸ್ ಅಧಿಕಾರಿಗಳು. ಒಬ್ಬರ ಊರು ಆಂದ್ರಪ್ರದೇಶ, ಇನ್ನೊಬ್ಬರ ಊರು ಕೇರಳ. ಕರ್ತವ್ಯದ ನಿಮಿತ್ತ ದಾವಣಗೆರೆಯಲ್ಲಿದ್ದ ಇಬ್ಬರಿಗೂ ಮಾಂಗಲ್ಯದ ನಂಟು ಬೆಸೆಯಿತು. ಪ್ರೇಮಿಗಳ ದಿನ ಅಂದರೇ ಫೆ. 14ರಂದೇ ಸಪ್ತಪದಿ ತುಳಿಯಲಿರುವ ಈ ಜೋಡಿ ಯಾರೆಂದರೆ ದಾವಣಗೆರೆ ಜಿಲ್ಲಾಧಿಕಾರಿ ಗೌತಮ್ ಬಗಾದಿ ಹಾಗೂ ಜಿಪಂ ಸಿಇಒ ಅಶ್ವತಿ.
ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಸಿಇಒ ಎಸ್. ಅಶ್ವತಿ ಅವರು ಫೆ. 14ರ ಪ್ರೇಮಿಗಳ ದಿನದಂದು ಕೇರಳದ ಕಲ್ಲಿಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದ ಡಾ| ಬಗಾದಿ ಗೌತಮ್ ಕಾಕಿನಾಡಿನ ರಂಗರಾಯ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ಅನಂತರ ಭಾರತ ಸೇವಾ ಆಯೋಗದ ಪರೀಕ್ಷೆ ಬರೆದವರು. 2009ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಅವರು ಬೆಳಗಾವಿ ಜಿ.ಪಂ. ಸಿಇಒ, ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ 4 ತಿಂಗಳ ಹಿಂದೆ ದಾವಣಗೆರೆ ಡಿಸಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇನ್ನು ಕೇರಳದ ಕಲ್ಲಿಕೋಟೆಯ ನಿವಾಸಿ ಎಸ್. ಅಶ್ವತಿ 2013ನೇ ಸಾಲಿನ ಐಎಎಸ್ ಅಧಿಕಾರಿ. ಮಣಿಪಾಲದಲ್ಲಿ ಎಂಬಿಎ ಮುಗಿಸಿದ ಬಳಿಕ ಐಎಎಸ್ ಪರೀಕ್ಷೆ ಬರೆದಿದ್ದರು. ಕುಂದಾಪುರ ಎಸಿ ಆಗಿದ್ದ ಅವರು 2016ರ ನ. 24ರಂದು ದಾವಣಗೆರೆ ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಗೃಹ ನಿರ್ಮಾಣವನ್ನು ಆಂದೋಲನ ರೂಪಕ್ಕಿಳಿಸಿದ್ದು ಇವರ ಸಾಧನೆ. ಶೌಚಗೃಹ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ ಕಾರ್ಯ, ಬಾಣಂತಿಯರಿಗೆ ಉಡಿ ತುಂಬುವ ಶಾಸ್ತ್ರವನ್ನು ಜಿ.ಪಂ.ನಿಂದಲೇ ನೆರವೇರಿಸಿ ಗಮನ ಸೆಳೆದಿದ್ದವರು.
ಡಾ| ಬಗಾದಿ ಗೌತಮ್ ಮತ್ತು ಎಸ್. ಅಶ್ವತಿ ಅವರದ್ದು ನಾಲ್ಕು ವರ್ಷದ ಗೆಳೆತನ. ಈಗ ಪ್ರೇಮಿಗಳ ದಿನದಂದೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೇರಳದ ಕೊಜಿಕೋಡಿನ ಟ್ಯಾಗೋರ್ ಹಾಲ್ನಲ್ಲಿ ಫೆ.14ರಂದು ವಿವಾಹ ಹಾಗೂ ಫೆ. 17 ರಂದು ವಿಶಾಖ ಪಟ್ಟಣದ ದಿ ಪಾರ್ಕ್ ಹೋಟೆಲ್ನಲ್ಲಿ ಆರತಕ್ಷತೆ ನಡೆಯಲಿದೆ.