ಮುಂಬೈ, ಫೆ 4(MSP): ನಾನು ಪ್ರಧಾನಿಯಾದಾಗ ನನ್ನಮ್ಮ ಪ್ರತಿಕ್ರಿಯೆ ಏನಾಗಿತ್ತು ಎಂದು , ಹೆಚ್ಚಿನ ಜನ ನನ್ನನ್ನು ಕೇಳುತ್ತಾರೆ ಆದರೆ ನನ್ನ ಅಮ್ಮನಿಗೆ ನಾನು ದೇಶದ ಪ್ರಧಾನಿ ಆಗಿದ್ದಕ್ಕಿಂತ ಗುಜರಾತಿನ ಮುಖ್ಯಮಂತ್ರಿ ಆಗಿದ್ದೇ ನನ್ನ ಅಮ್ಮನ ಪಾಲಿಗೆ ದೊಡ್ಡ ಮೈಲಿಗಲ್ಲು ಆಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹ್ಯೂಮನ್ಸ್ ಆಫ್ ಬಾಂಬೆ ಫೇಸ್ಬುಕ್ ಪುಟಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ. ನಾನು ಹಿಂದೆ ದೆಹಲಿಯಲ್ಲಿ ವಾಸವಿದ್ದೆ. ಆದರೆ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕರಿಸುವ ಮುಂಚೆ ಅಮ್ಮನನ್ನು ಕಾಣಲೆಂದು ಅಹಮದಾಬಾದ್ಗೆ ಹೋದೆ. ನನ್ನಮ್ಮ ನನ್ನ ಸಹೋದರನೊಂದಿಗೆ ಅಹಮದಾಬಾದ್ ನಲ್ಲಿ ವಾಸಿಸುತ್ತಿದ್ದಾರೆ. ನಾನು ಅಹಮದಾಬಾದ್ ತಲುಪಿದಾಗ ಅಲ್ಲಿ ಉತ್ಸವದಂತೆ ಸಂಭ್ರಮಾಚರಣೆ ನಡೆದಿತ್ತು. ನನ್ನಮ್ಮ ಹೀರಾಬೆನ್ ಮೋದಿಗೆ ನಾನು ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದೇನೆ ಎಂಬ ಸುದ್ದಿ ತಿಳಿದಿತ್ತು. ಆದರೆ ಮುಖ್ಯಮಂತ್ರಿಯ ಸ್ಥಾನಮಾನಗಳೆಂದು ಆಕೆಗೆ ನಿಜವಾಗಿಯೂ ಅರಿವಿರಲಿಲ್ಲ. ನನ್ನನ್ನು ಕಂಡ ಕ್ಷಣ, ಬಿಗಿದಪ್ಪಿಕೊಂಡು, 'ನೀನು ಗುಜರಾತ್ ಗೆಲ್ಲಿ ಮರಳುತ್ತಿರುವುದು ಸಂತೋಷ ನೀಡಿದೆ, ನೋಡು ಮಗನೇ, ನೀನು ಏನು ಮಾಡುತ್ತಿದ್ದಿಯೋ ಗೊತ್ತಿಲ್ಲ. ಆದರೆ ನೀನು ಎಂದಿಗೂ ಲಂಚ ಸ್ವೀಕರಿಸಬೇಡ, ಲಂಚ ತೆಗೆದುಕೊಳ್ಳುವ ಪಾಪದ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ ಎಂದು ನನಗೆ ಮಾತು ಕೊಡು ಎಂದಿದ್ದಳು. ನನ್ನಮ್ಮ ಆ ಕ್ಷಣದ ಮಾತುಗಳು ನನ್ನ ಮೇಲೆ ತುಂಬಾ ಪ್ರಭಾವ ಬೀರಿದವು.
ಜೀವನಪರ್ಯಂತ ಕಡಿಮೆ ಸವಲತ್ತು ಹಾಗೂ ಬಡತನದಲ್ಲಿಯೇ ಬದುಕಿದ ಮಹಿಳೆಯಾದ ನನ್ನ ತಾಯಿ ಲಂಚ ಸ್ವೀಕರಿಸುವುದು ಮಹಾಪಾಪ ಎಂದು ಹೇಳಿದ್ದು ನನ್ನ ಹೃದಯವನ್ನು ನಾಟಿತು. ಹಾಗಾಗಿ, ನಾನು ಪ್ರಧಾನಿಯಾಗಿದ್ದರೂ, ನನ್ನ ಆದರ್ಶದ ಬೇರುಗಳು ಬಲವಾಗಿದೆ.
ಈ ಹಿಂದೆ ನನಗೆ ಸಾಮಾನ್ಯ ಕೆಲಸ ದೊರಕಿತು ಅಂದರೂ ಸಾಕು ಅಮ್ಮ ಇಡೀ ಗ್ರಾಮಕ್ಕೆ ಸಿಹಿ ಹಂಚುತ್ತಿದ್ದಳು .ನಾನು ಸಿಎಂ -ಪಿಎಂ ಆಗಿರುವುದು ಅಮ್ಮನಿಗೆ ಮುಖ್ಯವಾಗಿರಲಿಲ್ಲ. ಆದರೆ ನಾನು ಎಂದಿಗೂ ಪ್ರಾಮಾಣಿಕನಾಗಿರಬೇಕು ಎಂದು ಆಕೆ ಬಯಸಿದ್ದಳು ಎಂದು ಮೋದಿ ತಮ್ಮ ಅಮ್ಮನ ಬಗ್ಗೆ ಹ್ಯೂಮನ್ಸ್ ಆಫ್ ಬಾಂಬೆ ಫೇಸ್ಬುಕ್ ಪುಟಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.