ಕೋಲ್ಕತ್ತಾ, ಫೆ 6 (MSP): ಕನ್ಯದಾನ ಹಿಂದೂ ಸಂಪ್ರದಾಯದ ವಿವಾಹದಲ್ಲಿ ಪ್ರಮುಖ ವಿಧಿಯಾಗಿರುತ್ತದೆ. ವಧುವಿನ ತಂದೆ ತಾಯಿ ತಮ್ಮ ಮಗಳನ್ನು ಯೋಗ್ಯ ವರನಿಗೆ ಧಾರೆ ಎರೆದು ಕೊಡುವ ಕನ್ಯಾದಾನ ಬಹಳ ಭಾವನಾತ್ಮಕವಾಗಿ ಕೂಡಿರುತ್ತದೆ. ಆದರೆ ಇದೀಗ ವಿವಾಹ ಸಮಾರಂಭವೊಂದರಲ್ಲಿ ವಧುವಿನ ತಂದೆಯೊಬ್ಬರು ’ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ’ ಎಂದು ಹೇಳಿರುವ ವಿಡಿಯೋ ಒಂದು ವೈರಲ್ ಆಗಿದ್ದು ಹೆಚ್ಚಿನವರು ಈ ವಿಚಾರವನ್ನು ಪ್ರಶಂಸೆ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಬೆಂಗಾಳಿ ಸಂಪ್ರದಾಯದಂತೆ ವಿವಾಹವಾಗಿದ್ದು, ಕಳೆದ ಸೋಮವಾರ ಮದುವೆ ಕಾರ್ಯಕ್ರಮ ನಡೆದಿತ್ತು. ವಿವಾಹ ಸಂಪ್ರದಾಯದ ಪ್ರಕಾರ ವಧುವಿನ ತಂದೆಯೂ ಕೆಲವು ರೀತಿನೀತಿಗಳಂತೆ ಮಾತನಾಡುತ್ತಾ ನನ್ನ ಮಗಳಾದ ವಧುವನ್ನು ದಾನ ಮಾಡುತ್ತಿದ್ದೇನೆ ಎಂದು ಹೇಳಬೇಕಿತ್ತು. ಆದರೆ ಈ ವಿವಾಹದಲ್ಲಿ ತಂದೆಯೂ ನಾನು ಮಗಳನ್ನು ಕನ್ಯಾದಾನ ಮಾಡುವುದಿಲ್ಲ ಏಕೆಂದರೆ ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಈ ವಿವಾಹ ಸಮಾರಂಭದಲ್ಲಿ ಇವಿಷ್ಟೇ ಆಗದೆ, ವಿವಾಹವನ್ನು ಸಂಪೂರ್ಣವಾಗಿ ಮಹಿಳಾ ಪುರೋಹಿತರೇ ಸೇರಿ ವಿಧಿವಿಧಾನವನ್ನು ನೆರವೇರಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಅಸ್ಮಿತಾ ಪೋಪ್ ಎಂಬುವರು "ನಾನು ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದೆ . ಆದರೆ ಅಲ್ಲಿ ಪುರುಷರಿಗೆ ಬದಲಾಗಿ ಮಹಿಳಾ ಪುರೋಹಿತರು ವಿವಾಹದ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದರು. ಈ ವೇಳೆ ವಧುವಿನ ತಂದೆ ಭಾಷಣ ಮಾಡಬೇಕಿತ್ತು. ಆಗ ತಂದೆ ನಾನು ಕನ್ಯಾದಾನ ಮಾಡುವುದಿಲ್ಲ. ನನ್ನ ಮಗಳು ಆಸ್ತಿಯಲ್ಲ ಎಂದು ಹೇಳಿದ್ದರು" ಎಂದು ಬರೆದುಕೊಂಡಿದ್ದಾರೆ.