ಲಕ್ನೋ, ಫೆ 7(MSP): ಮಹಾತ್ಮ ಗಾಂಧಿ ಹತ್ಯೆ ಘಟನೆಯನ್ನು ಮರುಸೃಷ್ಟಿಸಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮತ್ತು ಅವರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾತ್ಮ ಗಾಂಧಿ ಅವರ 71ನೇ ಪುಣ್ಯಸ್ಮರಣೆಯ ದಿನ (ಜನವರಿ 30) ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸುವ ಮೂಲಕ ಹತ್ಯೆ ಘಟನೆಯನ್ನು ಮರುಸೃಷ್ಟಿಸಲಾಗಿತ್ತು. ಭಾರತ ಹಿಂದೂ ಮಹಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮತ್ತವರ ತಂಡ ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ್ದರು. ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು 12 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.ಪ್ರಕರಣ ದಾಖಲಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದರು. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಇತರೆ ಮೂವರನ್ನು ಪೊಲೀಸರು ಕಳೆದ ವಾರವೇ ವಶಕ್ಕೆ ಪಡೆದಿದ್ದರು. ಪೂಜಾ ಪತಿ ಅಶೋಕ್ ಪಾಂಡೆಯನ್ನು ಬಂಧಿಸಿದ್ದಾರೆ.