ಮಲಪ್ಪುರಂ, ಫೆ 7(MSP): ಶಬರಿಮಲೆ ಪ್ರವೇಶಿಸಿ ವಿವಾದಕ್ಕೀಡಾಗಿರುವ ಕನಕದುರ್ಗಾ ಸ್ಥಳೀಯ ನ್ಯಾಯಾಲಯದ ತೀರ್ಪಿನನ್ವಯ ಮಲಪ್ಪುರಂ ಅಂಗಾಡಿಪುರದಲ್ಲಿರುವ ಪತಿ ಮನೆಗೆ ವಾಪಸಾಗಿದ್ದಾರೆ. ಆದರೆ ಕನಕ ಮನೆಗೆ ಆಗಮಿಸುತ್ತಿದ್ದಂತೆ ಪತಿ ಕೃಷ್ಣನುಣ್ಣಿ ತನ್ನ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಬೇರೆಡೆ ತೆರಳಿದ್ದಾರೆ. ಪೊಲೀಸರು ಬೀಗ ಒಡೆದು ಕನಕದುರ್ಗಾಳಿಗೆ ವಾಸ್ಯವ್ಯಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ಈ ಮುಂಚೆ ಕುಟುಂಬದವರು ಹೊರಹಾಕಿದ ಬಳಿಕ ಕನಕದುರ್ಗಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಕೆ ಮನೆಯಲ್ಲಿ ವಾಸಿಸಲು ಪತಿ ಸಂಬಂಧಿಕರು ಅಡ್ಡಿ ಮಾಡುವಂತಿಲ್ಲ. ಪತಿಯ ಹೆಸರಿನಲ್ಲಿರುವ ಮನೆಯನ್ನು ಮಾರಾಟ ಅಥವಾ ಬಾಡಿಗೆಗೂ ನೀಡುವಂತಿಲ್ಲ. ಪತಿಯ ಹೆಸರಿನಲ್ಲಿರುವ ಮನೆಯ ಮಾರಾಟ ಅಥವಾ ಬಾಡಿಗೆಗೂ ನೀಡುವಂತಿಲ್ಲ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿತ್ತು. ತನ್ನ ಪರ ತೀರ್ಪು ಬಂದ ಹಿನ್ನಲೆಯಲ್ಲಿ ಮಂಗಳವಾರ ಕನಕದುರ್ಗಾ ಪತಿ ಮನೆಗೆ ಪೊಲೀಸ್ ರಕ್ಷಣೆಯೊಂದಿಗೆ ಆಗಮಿಸಿದ್ದರು. ಸುಪ್ರಿಂ ಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಆಕೆಗೆ ಪೊಲೀಸ್ ರಕ್ಷಣೆ ಮುಂದುವರಿದಿದ್ದು, ಪೊಲೀಸ್ ಬೆಂಗಾವಲಿನೊಂದಿಗೆ ಕೆಲಸಕ್ಕೂ ತೆರಳಿದ್ದಾರೆ.
ಪತಿ ಮನೆಯಲ್ಲಿ ವಾಸಿಸಲು ತನಗೆ ಹಕ್ಕಿದೆ ಎಂದು ಪ್ರತಿಪಾದಿಸಿ ಕನಕದುರ್ಗಾ ಆಂತರಿಕ ಹಿಂಸಾಚಾರ ತಡೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದರು.