ಬೆಂಗಳೂರು, ಫೆ 07(SM): ಸಂಸತ್ ನ ಬಜೆಟ್ ಅದಿವೇಶನದ ಕೊನೆಯ ದಿನದಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಪಕ್ಕದಲ್ಲಿ ಕುಳಿತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌರರನ್ನು ಪ್ರಧಾನಿಗಳು ಕೆಣಕಿದ್ದಾರೆ. ಆದರೆಅಲ್ಲಿ ಸುಮ್ಮನಿದ್ದ ದೇವೇಗೌಡರು ಸಂಸತ್ ನಿಂದ ಹೊರ ಬಂದ ಬಳಿಕ ಸಾಮಾಜಿಕ ಜಾಲ ತಾಣದಲ್ಲಿ ಟ್ವಿಟ್ ಮಾಡಿ ಪ್ರಧಾನಿ ಮೋದಿಗೆ ಸರಿಯಾಗಿಯೇ ಉತ್ತರಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಮೋದಿ ಅವರು, 'ದೇವೇಗೌಡ ಅವರು ಇಂದು ಇಲ್ಲಿ ಕುಳಿತಿದ್ದಾರೆ. ಅವರನ್ನು ಮಣ್ಣಿನ ಮಗ ಎಂದು ಕರೆಯಲಾಗುತ್ತದೆ. ಅವರ ರಾಜ್ಯದ ಕತೆ ಏನಾಗಿದೆ ಎಂಬುವುದನ್ನು ಕೇಳಿ' ಎಂದು ರಾಜ್ಯದಲ್ಲಿ ಸಾಲಮನ್ನಾ ಯೋಜನೆಯ ಬಗ್ಗೆ ಮಾತು ಆರಂಭಿಸಿದ್ದಾರೆ. 48 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಆದರೆ ಈ ವರೆಗೆ ಕೇವಲ 7,000 ರೈತರ ಸಾಲ ಮನ್ನಾ ಆಗಿದೆ ಎಂದ ಮೋದಿ, ರಾಜ್ಯದಲ್ಲಿನ ರೈತರ ಸಾಲಮನ್ನಾ ಯೋಜನೆಯನ್ನು ಟೀಕಿಸಿದರು.
ಪ್ರಧಾನಿ ಮೋದಿಗೆ ಹೆಚ್ ಡಿಡಿ ಉತ್ತರ:
ನಾವು ರಾಜ್ಯದ ಜನತೆಗೆ ಕೊಟ್ಟಿದ್ದ ಭರವಸೆ ರೈತರ ಸಾಲಮನ್ನಾ. ಅದು ಪ್ರಗತಿಯಲ್ಲಿದೆ. ಆದರೆ ಮೋದಿ ಭರವಸೆ ನೀಡಿದ್ದ ರಾಮ ಮಂದಿರ ನಿರ್ಮಾಣ, ಸ್ವಚ್ಛ ಗಂಗಾ, ಖಾತೆಗೆ 15 ಲಕ್ಷ ಭರವಸೆಗಳು ಇನ್ನೂ ಈಡೇರಿಲ್ಲ. ಭರವಸೆ ಈಡೇರಿಸದೇ ಇರುವುದಕ್ಕಿಂತಲೂ ಜಾರಿಯಲ್ಲಿರುವುದು ಉತ್ತಮ ಅಲ್ಲವೇ ಎಂದು ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಜಾರಿಯಲ್ಲಿರುವ ಒಂದೇ ಕಾರ್ಯವೆಂದರೆ 'ಆಪರೇಷನ್ ಕಮಲ' ಮಾತ್ರ. ಅದನ್ನು ಅವರು ಕರ್ನಾಟಕದಲ್ಲಿ ಬಳಸುತ್ತಿದ್ದಾರೆ ಎಂದು ದೇವೇಗೌಡ ಅವರು ವ್ಯಂಗ್ಯ ಮಾಡಿದ್ದಾರೆ.
ಆ ಮೂಲಕ ತಮ್ಮ ಪಾಡಿಗೆ ಸಂಸತ್ ನಲ್ಲಿ ಕುಳಿತಿದ್ದ ತನ್ನನ್ನು ಟೀಕಿಸಿ ಪ್ರಧಾನಿಗಳಿಗೆ ಹೆಚ್ ಡಿಡಿ ಸರಿಯಾಗಿಯೇ ಉತ್ತರವನ್ನು ನೀಡಿದ್ದಾರೆ.