ಬೆಂಗಳೂರು, ಫೆ 8(MSP): ದೋಸ್ತಿ ಸರ್ಕಾರದ ಬಜೆಟ್ ನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಮಂಡಿಸಲಿದ್ದಾರೆ. ಇನ್ನೊಂದೆಡೆ ದೋಸ್ತಿ ಸರಕಾರದ ಭವಿಷ್ಯ ನಿರ್ಧರಿಸುವ ಅತ್ಯಂತ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ನಡೆಯಲಿದೆ. ಈ ನಡುವೆ ರಾಜ್ಯ ರಾಜಕೀಯದಲ್ಲಿ ಗೊಂದಲ ಮುಂದುವರಿದಿದೆ. ಅತೃಪ್ತ ಶಾಸಕರು ಮತ್ತು ಬಿಜೆಪಿಯ ಹೂಡುತ್ತಿರುವ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೂಡುತ್ತಿದೆ. ಈ ಎಲ್ಲಾ ಬೆಳವಣಿಗೆ ಜೊತೆ, ಸಿಎಂ ಸುದ್ದಿಗೋಷ್ಟಿ ನಡೆಸಿ, ಬಿಜೆಪಿ ನಡೆಸಿದ ಅಪರೇಷನ್ ಆಡಿಯೋ ಬಾಂಬ್ ಹಾಕಿದ್ದಾರೆ. ಒಟ್ಟಾರೆ ರಾಜ್ಯ ರಾಜಕೀಯದತ್ತ ಎಲ್ಲರ ಚಿತ್ತ ನೆಟ್ಟಿದೆ.
ಬಿಜೆಪಿಯು ಸುಳ್ಳು ಹೇಳಿಕೊಂಡು ತಿರುಗುತ್ತಿದೆ, ಗೋ ಬ್ಯಾಕ್ ಸಿಎಂ ಎಂದು ಹೇಳೋ ಬಿಜೆಪಿ ಇನ್ನೊಂದೆಡೆ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಹೇಳುತ್ತದೆ ಆದರೆ ಯಾವುದನ್ನು ಕೂಡಾ ಸಾಬೀತುಮಾಡುವ ಸಾಮರ್ಥ್ಯ ಬಿಜೆಪಿಗೆ ಇಲ್ಲವಾಗಿದೆ. ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಬಿಜೆಪಿ ಪಣತೊಟ್ಟಂತಿದೆ ಎಂದು ಕಿಡಿಕಾರಿದ್ದಾರೆ.
ಬಜೆಟ್ ಮಂಡನೆ ಮಾಡೋದು ಅಂದರೆ ಹುಡುಗಾಟಿಕೆಯಲ್ಲ, ಅದರ ಮಹತ್ವ ಬಿಜೆಪಿಗರಿಗೆ ತಿಳಿದಿರಲಿ, ನಿಮಗೆ ಗಲಾಟೆ ಮಾಡಬೇಕೆನ್ನುವ ಮನಸ್ಸಿದ್ರೆ ಗಲಾಟೆ ಮಾಡಿ ಆದರೆ ಬಜೆಟ್ ಮಂಡನೆಗೆ ಅಡ್ಡಿ ಮಾಡಬೇಡಿ - ಬಿ.ಜೆ.ಪಿ. ಶಾಸಕರಿಗೆ ಸಿ.ಎಂ. ಕುಮಾರಸ್ವಾಮಿ ಇದೇ ವೇಳೆ ಮನವಿ ಮಾಡಿಕೊಂಡರು.
2008ರಲ್ಲಿ ಬಿಜೆಪಿ ನಡೆಸಿದ್ದ ಅಪರೇಷನ್ ಕಮಲ ಚಾಳಿಯನ್ನು ಬಿಜೆಪಿ ಇನ್ನು ಮುಂದುವರಿಸಿಕೊಂಡು ಬಂದಿದೆ ಎಂದ ಸಿಎಂ, ಶಾಸಕ ನಾಗನ ಗೌಡ ಪಾಟೀಲ ಅವರ ಪುತ್ರ ಶಿವನಗೌಡ ಅವರಿಗೆ ಬಿ.ಎಸ್.ಯಡಿಯೂರಪ್ಪ, ಆಮಿಷ ಒಡ್ಡುತ್ತಿರುವ ಆಡಿಯೋ ಮೂರು ಆಡಿಯೋ ಕ್ಲಿಪ್ ನ್ನು ಬಿಡುಗಡೆ ಮಾಡಿದ್ದಾರೆ.
ಈ ಹಿಂದೆ ಬಿಜೆಪಿ ನೇರವಾಗಿ ಶಾಸಕರೊಂದಿಗೆ ಮಾತನಾಡಿ ಡೀಲ್ ಕುದುರಿಸುತ್ತಿತ್ತು. ಆದರೆ ಬಿಜೆಪಿ ಇದೀಗ ಆಪ್ತರ ಜೊತೆ ಮಾತನಾಡುತ್ತಾರೆ. ಹೀಗಾಗಿ ಶಾಸಕರನ್ನು ಸೆಳೆಯಲು ಅವರ ಪುತ್ರ ಶರಣಗೌಡ ಪಾಟೀಲ್ ಅವರ ಜೊತೆ ಡೀಲಿಂಗ್ ಮಾಡಿದ್ದಾರೆ ಎಂದ ಸಿಎಂ ಆರೋಪಿಸಿದರು.
ಬಳಿಕ ಪತ್ರಿಕಾಗೋಷ್ಟಿಯಲ್ಲಿ ಖುದ್ದು ಶರಣಗೌಡ ಪಾಟೀಲ್ ಮಾತನಾಡಿ , ಮೊನ್ನೆ ರಾತ್ರಿ ಯಡಿಯೂರಪ್ಪನವರೇ ಕಾಲ್ ಮಾಡಿ ಆಫರ್ ನೀಡಿದರು. ನಂತರದ ಅದೇ ದಿನ ರಾತ್ರಿ 12 ಗಂಟೆಗೆ ದೇವದುರ್ಗ ಐಬಿಗೆ ಬರಲು ಹೇಳಿದರು. ನಾನಲ್ಲಿಗೆ ಹೋದಾಗ ಶಾಸಕರಾದ ಶಿವನಗೌಡ ನಾಯಕ್ ಮತ್ತು ಹಾಸನ ಶಾಸಕ ಪ್ರೀತಂ ಗೌಡ ಅವರಿದ್ದರು. ಅಲ್ಲಿ ನಮಗೆ 50 ಕೋಟಿ ಹಾಗೂ ಮಂತ್ರಿಸ್ಥಾನದ ಆಫರ್ ನೀಡಿದರು ಎಂದು ತಿಳಿಸಿದ್ದಾರೆ