ಬೆಂಗಳೂರು, ಫೆ 8(MSP): ಬಜೆಟ್ ಅಧಿವೇಶನಕ್ಕೂ ಕೆಲವೇ ಗಂಟೆ ಬಾಕಿ ಇರುವಂತೆ ರಾಜ್ಯ ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ಚಟುವಟಿಕೆ ಚುರುಕುಗೊಂಡಿದೆ. ಬಜೆಟ್ ಮಂಡನೆಗೂ ಮುನ್ನ ತುರ್ತು ಪತ್ರಿಕಾಗೋಷ್ಟಿ ನಡೆಸಿದ ಸಿಎಂ ಕುಮಾರಸ್ವಾಮಿ, ದೇವದುರ್ಗದ ಐಬಿಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಜೆಡಿಎಸ್ ಶಾಸಕನ ಪುತ್ರನಿಗೆ ಆಮಿಷವೊಡ್ಡಿರುವ ಆಡಿಯೋ ಕ್ಲಿಪ್ ಗಳನ್ನು ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ತ ಕಡೆ ಸಿಎಂ ಪತ್ರಿಕಾಗೋಷ್ಟಿ ಮುಗಿಯುತ್ತಿದ್ದಂತೆ, ಮಾಜಿ ಸಿಎಂ ಯಡಿಯೂರಪ್ಪ ಅವರು ಪತ್ರಿಕಾಗೋಷ್ಟಿ ಕರೆದು ಸಿಎಂ ಆರೋಪಗಳಿಗೆ ಪ್ರತ್ಯಾರೋಪ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಸಿನಿಮಾ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಜೆಡಿಎಸ್ ಎಂಎಲ್ಎ ನಾಗನಗೌಡ ಅವರ ಮಗ ಶರಣಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಕಥೆಹೆಣೆದಿದ್ದಾರೆ. ಸಿಎಂ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ನಕಲಿಯಾಗಿದ್ದು, ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಸಾಬೀತು ಪಡಿಸಿದರೆ ನಾನು 24 ಗಂಟೆಯಲ್ಲೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಸವಾಲು ಎಸೆದಿದ್ದಾರೆ. ಇದಲ್ಲದೇ ಸ್ಪೀಕರ್ , ಜಡ್ಜ್ ಗಳನ್ನು ಬುಕ್ ಮಾಡಿದ್ದೇವೆ ಎಂಬ ಆರೋಪ ಶುದ್ಧ ಸುಳ್ಳು ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ಪ್ರಾಮಾಣಿಕವಾಗಿ ಇದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಒಟ್ಟಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ.ಇವತ್ತು ಕೂಡಾ 10-11 ಕಾಂಗ್ರೆಸ್ ಶಾಸಕರು ಸದನಕ್ಕೆ ಹಾಜರಾಗುವುದಿಲ್ಲ. ಒಟ್ಟು 15 ಮಂದಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಜೆಟ್ ಅಧಿವೇಶಕ್ಕೆ ಹಾಜರಾಗುವುದಿಲ್ಲ. ಹೀಗಾಗಿ ಬಹುಮತ ಇಲ್ಲದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿಯಲಿ ಎಂದು ಬಿಎಸ್ ವೈ ಗುಡುಗಿದ್ದಾರೆ.