ಬೆಂಗಳೂರು,ಫೆ 8(MSP): ’ದೇವದುರ್ಗದ ಐಬಿಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಜೆಡಿಎಸ್ ಶಾಸಕನ ಪುತ್ರನಿಗೆ ಆಮಿಷವೊಡ್ಡಿರುವ ಆಡಿಯೋ ಕ್ಲಿಪ್ " ವೊಂದನ್ನು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕಿಯೆ ನೀಡಿರುವ ಶಾಸಕ ಶ್ರೀರಾಮುಲು, ಅದರಲ್ಲಿರುವ ಧ್ವನಿ ಮಿಮಿಕ್ರಿ ಮಾಡಿ ತಯಾರಿಸಿರುವ ನಕಲಿ ಆಡಿಯೋ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ .ಹೀಗಾಗಿ ಸರ್ಕಾರ ಮಂಡಿಸುವ ಬಜೆಟ್ಗೆ ಮನ್ನಣೆ ಇರುವುದಿಲ್ಲ. ಹೀಗಾಗಿ ಈ ವಿಚಾರಗಳು ಬಯಲಿಗೆ ಬಾರದಂತೆ ತಡೆಹಿಡಿಯಲು ನಕಲಿ ಆಡಿಯೋ ಬಿಡುಗಡೆ ಮಾಡಿ ನಾಟಕವಾಡಿದ್ದಾರೆ.
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಯಾರು ಏನನ್ನು ಬೇಕಾದರೂ ಮಾಡಬಹುದು. ಹೀಗಾಗಿ ಯಡಿಯೂರಪ್ಪ ಮಾತಿನ ಶೈಲಿಯನ್ನು ಮಿಮಿಕ್ರಿ ಮಾಡಿ ಆಡಿಯೋ ಮಾಡಲಾಗಿದೆ. ಶಾಸಕರಿಗೆ ಕೋಟಿ ಕೋಟಿ ನೀಡಿ ಖರೀದಿಸಲು ನೋಡಿ ಅವರೇ ತಮ್ಮ ಡಿಮ್ಯಾಂಡ್ ಸೃಷ್ಟಿ ಮಾಡುವ ಆಟ ಆಡುತ್ತಿದ್ದಾರೆ.ಖುದ್ದು ಮುಖ್ಯಮಂತ್ರಿಗಳೇ ಇಂತಹ ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದರೆ ರಾಜ್ಯ ರಾಜಕೀಯದಲ್ಲಿ ಎಂತಹ ಸ್ಥಿತಿ ನಿರ್ಮಾಣ ಆಗಿದೆ ಎಂಬುದನ್ನು ತಿಳಿಯಬಹುದು. ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳು ಕುಮಾರಸ್ವಾಮಿ ಕಸರತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.