ಮಂಡ್ಯ, ಫೆ 10 (MSP):ಬಿಜೆಪಿ ಸೇರ್ಪಡೆಗೊಂಡ ಕೆಲವು ವರ್ಷ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ತ್ಯಜಿಸಿದ ಗುಟ್ಟುರಟ್ಟು ಮಾಡಿರುವ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್ .ಎಂ ಕೃಷ್ಣ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನೊಳಗೆ ವಿಷಪೂರಿತ ವಾದಂತಹ ಪರಿಸ್ಥಿಯಿಂದ ಬೇಸತ್ತು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದೆ. ಪಕ್ಷದಲ್ಲಿ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ರಾಹುಲ್ ಗಾಂಧಿ ಪದೇಪದೇ ನಡೆಸುತ್ತಿದ್ದ ರಾಜಕೀಯ ಹಸ್ತಕ್ಷೇಪದಿಂದ ಬೇಸತ್ತಿದೆ ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ದೂರಿದರು.
ಶನಿವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು 2009ರಿಂದ 2014ರವರೆಗೆ ಕಾಂಗ್ರೆಸ್ನಲ್ಲಿ ವಿಷಪೂರಿತವಾದಂಥ ಪರಿಸ್ಥಿತಿಯಿತ್ತು. 10 ವರ್ಷಗಳ ಹಿಂದೆ ರಾಹುಲ್ ಅವರು ಪಕ್ಷದ ಯಾವ ಹುದ್ದೆಯಲ್ಲಿ ಇಲ್ಲದಿದ್ದರೂ ಹೆಚ್ಚುವರಿ ಸಂವಿಧಾನೇತರ ಅಧಿಕಾರವನ್ನು ಚಲಾಯಿಸುತ್ತಿದ್ದರು.
ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹೆಸರಿಗೆ ಮಾತ್ರ ಹುದ್ದೆಯಲ್ಲಿದ್ದರು. ಹಲವಾರು ವಿಚಾರಗಳು ಸಿಂಗ್ ಗಮನಕ್ಕೆ ಬಾರದಂತೆ ನಡೆಯುತ್ತಿದ್ದವು. ಪ್ರಧಾನಿಯಾಗಿದ್ದ ಸಿಂಗ್ ಅವರು ತಮ್ಮ ಜತೆಗಾರರ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದರು. ಯುಪಿಎ ಸರ್ಕಾರದಲ್ಲಿ ಯಾರ ಮೇಲೂ ನಿಯಂತ್ರಣ ಇರಲಿಲ್ಲ. ಆಗಲೇ ಹಗರಣಗಳ ಸುರಿಮಳೆ ನಡೆದವು. ದೇಶಕ್ಕೆ ಸಮರ್ಥ ನಾಯಕತ್ವ ಇಲ್ಲದಿದ್ದರೆ ಎಂಥ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದಕ್ಕೆ ಇದು ಪ್ರತ್ಯಕ್ಷ ಉದಾಹರಣೆ ಎಂದು ಹೇಳಿದರು.