ಬೆಂಗಳೂರು,ಫೆ 10 (MSP): ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿದ ‘ಆಪರೇಷನ್ ಆಡಿಯೋ’ದಲ್ಲಿ ಇರುವ ಧ್ವನಿ ನನ್ನದಲ್ಲ, ಒಂದು ವೇಳೆ ಕುಮಾರಸ್ವಾಮಿ ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಡನ್ ಆಗಿ ಇದೀಗ ಯೂಟರ್ನ್ ಹೊಡೆದಿದ್ದಾರೆ.
‘ಆಪರೇಷನ್ ಆಡಿಯೋ’ದಲ್ಲಿ ಇರುವ ಧ್ವನಿ ನನ್ನದೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ತಾನು ದೇವದುರ್ಗಕ್ಕೆ ಹೋಗಿದ್ದು ನಿಜ. ಶಾಸಕರ ಪುತ್ರ ಶರಣ ಗೌಡರ ಜೊತೆ ಮಾತನಾಡಿದ್ದು ಕೂಡಾ ಸತ್ಯ.ಆಡಿಯೋದಲ್ಲಿರುವ ಧ್ವನಿ ಕೂಡಾ ನನ್ನದೇ. ಆದರೆ ಇಲ್ಲಿ ಕೆಲ ಸತ್ಯಗಳನ್ನು ಮರೆಮಾಡಲಾಗಿದೆ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕುತಂತ್ರದ ರಾಜಕಾರಣ ಮಾಡಿರುವ ಕುಮಾರಸ್ವಾಮಿಯ ಬಂಡವಾಳ ಸೋಮವಾರ ಬಿಚ್ಚಿಡುತ್ತೇನೆ ಎಂದು ಬಿಎಸ್ವೈ ಹೇಳಿದ್ದಾರೆ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೇಕಾದ ಆಡಿಯೋವನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ. ಆದರೆ ಅಲ್ಲಿ ನಡೆದ ಪೂರ್ಣ ಸಂಭಾಷಣೆ ನನ್ನಲ್ಲಿದೆ. ಸಂಪೂರ್ಣ ಆಡಿಯೋವನ್ನು ನಾನು ಸೋಮವಾರ ಸದನದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ‘ಆಪರೇಷನ್ ಆಡಿಯೋ’ದ ಮತ್ತೊಂದು ಬಾಗಿಲು ತೆರೆದುಕೊಳ್ಳುವುದು ಖಚಿತವಾಗಿದೆ.