ನವದೆಹಲಿ, ಫೆ 10(SM): ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದ ಪ್ರವೀಣ್ ತೊಗಾಡಿಯಾ ಅವರು ತನ್ನದೇಯಾದ ಹೊಸದೊಂದು ರಾಜಕೀಯ ಪಕ್ಷ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಈಗಾಗಲೇ ಪ್ರವೀಣ್ ತೊಗಾಡಿಯಾ ಅವರು ತನ್ನ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಹಿಂದೂಸ್ತಾನ್ ನಿರ್ಮಾನ್ ದಳ್ ಎಂದು ಹೆಸರಿಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಸ ಪಕ್ಷದಲ್ಲಿ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ. ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ತಮ್ಮ ಪಕ್ಷ ಸ್ಪರ್ಧೆ ಮಾಡಲಿದೆ ಎಂಬುವುದಾಗಿ ಅವರು ಬಹಿರಂಗಗೊಳಿಸಿದ್ದಾರೆ.
ಮೂಲ ಸೌಕರ್ಯ, ಬಡತನ ನಿರ್ಮೂಲನೆ ಹಾಗೂ ಇನ್ನಿತರ ಸವಲತ್ತುಗಳನ್ನು ಕಲ್ಪಿಸಲು ಎಲ್ಲಾ ರಾಜಕೀಯ ಪಕ್ಷಗಳು ವಿಫಲಗೊಂಡಿವೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷ ಈ ಸಮಸ್ಯೆಗಳನ್ನು ನಿವಾರಿಸಲಿದೆ ಎಂದು ಹೇಳಿದರು.
ಪ್ರವೀಣ್ ತೊಗಾಡಿಯಾ ಅವರು ಈ ಹಿಂದೆ ನರೇಂದ್ರ ಮೋದಿಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜಸ್ಥಾನ ಸರ್ಕಾರದ ವಿರುದ್ಧ ನಿಲ್ಲುವ ಮೂಲಕ ಎಲ್ಲರೊಂದಿಗೆ ವಿರೋಧವನ್ನು ಹೊಂದಿದ್ದರು. ಇದೇ ಕಾರಣಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್ ಸೇರಿದಂತೆ ಹಿಂದೂ ಪರ ಸಂಘಟನೆಗಳಿಂದ ಪ್ರವೀಣ್ ತೊಗಡಿಯಾ ಅವರನ್ನು ದೂರ ಇರಿಸಲಾಯಿತು.
ಈ ಎಲ್ಲಾ ಕಾರಣಗಳಿಂದ ಪ್ರವೀಣ್ ತೊಗಾಡಿಯಾ ನೂತನ ಪಕ್ಷದತ್ತ ಒಲವನ್ನು ತೋರಿದ್ದು, ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ.