ಬೆಂಗಳೂರು,ಫೆ 11(MSP): ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ‘ಅಪರೇಷನ್ ಆಡಿಯೋ ’ ಹಗರಣ ಇದೀಗ ವಿಧಾನ ಸಭೆಯಲ್ಲೂ ಪ್ರಸ್ತಾಪಗೊಂಡು ತೀವ್ರ ಚರ್ಚೆಗೆ ಕಾರಣವಾಗಿದೆ. ಕಲಾಪ ಆರಂಭ ಪ್ರಾರಂಭವಾಗುತ್ತಿದ್ದಂತೆ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸದನವನ್ನುದ್ದೇಶಿಸಿ ಮಾತನಾಡುತ್ತ ಅಪರೇಷನ್ ಆಡಿಯೋದಲ್ಲಿ , ತಮ್ಮ ಮೇಲೆ ಕೇಳಿಬಂದಿರುವ ಹಣ ಪಡೆದುಕೊಂಡಿರುವ ಆರೋಪಗಳಿಂದ ನಾನು ಎರಡು ದಿನಗಳಿಂದ ಮಾನಸಿಕ ತೀವ್ರವಾಗಿ ನೊಂದುಕೊಂಡಿದ್ದೇನೆ. ಸದನಕ್ಕೆ ಬರುವ ಮುಂಚೆ ಮತ್ತೊಮ್ಮೆ ನಾನು ಧ್ವನಿ ಮುದ್ರಿಕೆಯನ್ನು ಕೇಳಿಸಿಕೊಂಡಿದ್ದೇನೆ. ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಪ್ರಾಮಾಣಿಕವಾಗಿಯೇ ಬದುಕಿದ್ದೇನೆ. ಮತ್ತು ಪಕ್ಷಾತೀತವಾಗಿ ಉತ್ತಮ ಸಂಸದೀಯಪಟುಗಳನ್ನು ಗುರುತಿಸುವ ಮತ್ತು ಗೌರವಿಸುವ ಕಾರ್ಯವನ್ನಷ್ಟೇ ಮಾಡುತ್ತಾ ಬಂದಿದ್ದೇನೆ.
ಆದರೆ 50 ಕೋಟಿ ಹಣ ನನಗೆ ನೀಡಿದ್ದಾರೆ ಎಂದು ಆರೋಪ ಆಡಿಯೋದಲ್ಲಿ ಮಾಡಲಾಗಿದೆ. ನನಗೆ 50 ಕೋಟಿ ಎಲ್ಲಿ ಕೊಟ್ಟರು? ಯಾವಾಗ ನೀಡಿದ್ದಾರೆ? ನಾನು ಸಾವಿಗೆ ಭಯ ಪಡಲ್ಲ, ಆದ್ರೆ ಆರೋಪಕ್ಕೆ ಭಯ ಪಡ್ತೀನಿ ಅಂತಾ ಹೇಳಿದರು.
ನಾನು ದೊಮ್ಮಲೂರಿನಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ನನಗೆ ಸರ್ಕಾರ ನೀಡಿದ ಸರ್ಕಾರಿ ಬಂಗಲೆಯನ್ನು ತಗೆದುಕೊಂಡಿಲ್ಲ. ನಾನು ವಾಸವಿರುವ ಮನೆ ಬಳಿ ಸಾರ್ವಜನಿಕರಿಗೆ ತೊಂದರೆ ಯಾಗುತ್ತೆ ಬೋರ್ಡ್ ಹಾಕಿಲ್ಲ. ೫೦ ಕೋಟಿ ನೀಡಿದ್ದೇನೆ ಎಂದು ಆರೋಪಿಸುತ್ತಾರಲ್ಲಾ..ಅಷ್ಟೊಂದು ಹಣ ನನ್ನ ಸಣ್ಣ ಮನೆಯಲ್ಲಿ ಎಲ್ಲಿಡಲಿ. ಇಷ್ಟೊಂದು ಹಣ ಇಡಲು ಜಾಗ ಬೇಕಲ್ವಾ? ನನಗ್ಯಾಕೆ ಈ ಶಿಕ್ಷೆ..? ಅಪವಾದಗಳ ಹಣೆಪಟ್ಟಿ ಹಚ್ಚಿಕೊಂಡು ಈ ಸಮಾಜದಲ್ಲಿ ಮುಖತೋರಿಸೋಕೆ ಆಗುತ್ತೆಯೇ? ಆರೋಪಗಳನ್ನು ಹೊತ್ತು ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವೇ ಎಂದು ನೊಂದು ಭಾವುಕರಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಪೀಕರ್ ಮಾತಿಗೆ ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ, ಇದು ನಿಮ್ಮ ವೈಯಕ್ತಿಕ ಅಲ್ಲ. ಇಲ್ಲಿ ಸದನದ ಸದಸ್ಯರ ಹಕ್ಕುಚ್ಯುತಿಯಾಗಿದೆ ಹಾಗಾಗಿ ಗೌರವಾನ್ವಿತ ಸದನದ ಸದಸ್ಯನಾಗಿ ನನ್ನ ಹಕ್ಕಿಗೂ ಚ್ಯುತಿ ತರುವ ಘಟನೆ ಇದಾಗಿದೆ ಹಾಗಾಗಿ ಇದರ ಬಗ್ಗೆ ಕಠಿಣ ಕ್ರಮವನ್ನು ನೀವು ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.