ಬೆಂಗಳೂರು,ಫೆ 13 (MSP): ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಸೇರಿ ಎಲ್ಲ ಆರೋಪಿಗಳ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ ಹಿಂದೆ ರೆಡ್ದಿ 18 ಕೋಟಿ ಹಣ ಪಡೆದಿದ್ದು, ರೆಡ್ಡಿ ಬಂಧನವಾದಾಗ 18 ಕೋಟಿ ಪಾವತಿಸೋದಾಗಿ ಅಫಿಡವೀಟ್ ಸಲ್ಲಿಸಿದ್ದರು. ಆದರೆ 18 ಕೋಟಿ ಪಾವತಿಸಿದ ಕಾರಣ , ಆ್ಯಂಬಿಡೆಂಟ್ ವಂಚನೆ ಪ್ರಕರಣ ಹಿನ್ನಲೆಯಲ್ಲಿ ಜಪ್ತಿ ಆದೇಶ ನೀಡಲಾಗಿದೆ.
ಆಂಬಿಡೆಂಟ್ ಕಂಪನಿ ಮಾಲಕ ಸೈಯದ್ ಫರೀದ್ ತನ್ನ ಇತರ ಸಹಚರರ ಜತೆಗೂಡಿ ಹೆಚ್ಚಿನ ಬಡ್ಡಿ ನೀಡುವುದಾಗಿ ಆಸೆ ತೋರಿಸಿ ಆರ್ಬಿಐ ಮಾರ್ಗಸೂಚಿ ಪಾಲಿಸದೆ, ಗ್ರಾಹಕರಿಂದ ದುಡ್ಡು ಪಡೆದು ಅದನ್ನು ಸ್ವಂತ ಲಾಭಕ್ಕಾಗಿ ರಿಯಲ್ ಎಸ್ಟೇಟ್, ಬೇನಾಮಿ ಆಸ್ತಿಯಲ್ಲಿ ತೊಡಗಿಸಿದ್ದ. ಈ ಸಂಬಂಧ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ ಸೆಕ್ಷನ್ 5ರ ಅಡಿಯಲ್ಲಿ ವಂಚಕ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಜತೆಗೆ ವಂಚನೆ ಪ್ರಕರಣವನ್ನು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಮುಖ್ಯ ಆರೋಪಿ ಫರೀದ್, ಹಾಗೂ ಜನಾರ್ದನ ರೆಡ್ಡಿ ಸೇರಿ ಇತರ ಆರೋಪಿಗಳಿಗೆ ಸೇರಿದ ಅಂದಾಜು 100 ಕೋಟಿ ರೂ. ಆಸ್ತಿಯನ್ನು ಪತ್ತೆಮಾಡಿದ್ದರು. ಈ ಪೈಕಿ ಜನಾರ್ದನ ರೆಡ್ಡಿಗೆ ಸೇರಿದ ಬೆಂಗಳೂರಿನ ಪಾರಿಜಾತ ಮನೆಯನ್ನು ಗುರುತಿಸಿದ್ದಾರೆ. ಈ ಎಲ್ಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮಂಗಳವಾರ ಸರ್ಕಾರ ಆಸ್ತಿ ಮುಟ್ಟುಗೋಲಿಗೆ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸಿದೆ ಎಂದು ಸರ್ಕಾರದ ವಿಶೇಷಾಧಿಕಾರಿ ಬೆಂಗಳೂರು ಉತ್ತರ ವಿಭಾಗ ಎಸಿ ಎಲ್.ನಾಗರಾಜು ಮಾಹಿತಿ ನೀಡಿದ್ದಾರೆ.
ಇದಾದ ಮೇಲೆ ಪತ್ರಿಕಾ ಪ್ರಕಟಣೆ ಹೊರಡಿಸಿ ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಕೋರ್ಟ್ ಅನುಮತಿ ಪಡೆದು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯನ್ನು ಬಹಿರಂಗ ಹರಾಜು ಹಾಕಲಾಗುತ್ತದೆ. ಇದರಿಂದ ಬಂದ ಹಣವನ್ನು ನ್ಯಾಯಾಲಯದ ಮಾರ್ಗಸೂಚಿಯಂತೆ ವಂಚನೆಗೆ ಒಳಗಾಗಿರುವ ಹೂಡಿಕೆದಾರರಿಗೆ ವಿತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.