ಬೆಂಗಳೂರು, ಫೆ 13 (MSP): ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನಾನು ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಅತೃಪ್ತ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಹೇಳಿದ್ದಾರೆ.
ಮಂಗಳವಾರ ತಾನೇ ಜಾದವ್ ಅವರ ಸಹೋದರ ರಾಮಚಂದ್ರ ಜಾಧವ್, ಪತ್ರಿಕಾಗೋಷ್ಟಿ ನಡೆಸಿ, ಚಿಂಚೋಳಿ ಶಾಸಕ ಡಾ|ಉಮೆಶ್ ಜಾಧವ್ ಕಾಂಗ್ರೆಸ್ ಪ್ರಾರ್ಥಮಿಕ ಸದಸ್ಯ ಮತ್ತು ಶಾಸಕ ಸ್ಥಾನಕ್ಕೆ ಶೀಘ್ರವೇ ರಾಜೀನಾಮೆ ನೀಡಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದರು. ಸಹೋದರನ ಹೇಳಿಕೆ ಬಳಿಕ ಯೂ ಟರ್ನ್ ಹೊಡೆದಿರುವ ಶಾಸಕ ಉಮೇಶ್ ಜಾಧವ್ , ಮತದಾನ ಇರೋ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದೇನೆ. ಇನ್ನು ಸಿಎಲ್ಪಿ ಸಭೆಗೆ ನನ್ನ ವೈಯಕ್ತಿಕ ಕಾರಣಕ್ಕಾಗಿ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಕುರಿತು ನಾಯರಿಗೆ ಸ್ಪಷ್ಟನೆ ನೀಡುವೆ. ಒಂದು ವೇಳೆ ನನ್ನ ಸ್ಪಷ್ಟನೆಯಲ್ಲಿ ತಪ್ಪು ಕಂಡುಬಂದರೆ ಪಕ್ಷದ ನಾಯಕರು ನನ್ನ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ’ ಆದರೆ ನಾನು ಪಕ್ಷ ಬಿಡುವ ಯೋಚನೆಯೇ ಮಾಡಿಲ್ಲ ಎಂದು ಹೇಳಿದರು.
ಸರ್ಕಾರವನ್ನು ಉರುಳಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರವನ್ನು ಅತಂತ್ರಗೊಳಿಸುವ ವಿಚಾರಕ್ಕೆ ನಾನು ಕೈಹಾಕಿಲ್ಲ. ನನ್ನ ಬೆಂಬಲಿಗರು ಸಚಿವ ಸ್ಥಾನಕ್ಕೆ ಒತ್ತಾಯ ಮಾಡಿದ್ದು ನಿಜ.ಆದರೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಸರ್ಕಾರವನ್ನು ಉರುಳಿಸುವ ಯತ್ನವಾಗಿ ನಾನು ಯಾರನ್ನು ಬೇಟಿ ಮಾಡಿಲ್ಲ. ಮುಂಬೈಗೆ ಹೋಗಿಲ್ಲ. ಬಿಜೆಪಿ ಪಕ್ಷ್ದಲ್ಲಿ ನನ್ನ ಗೆಳೆಯರಿದ್ದಾರೆ. ಅವರನ್ನೂ ಸಂಪರ್ಕದಲ್ಲಿ ಇರದೇ ಇರಕ್ಕಾಗುತ್ತಾ? ಹಾಗೆಂದು ಅದೆಲ್ಲವನ್ನು ಸರ್ಕಾರ ಉರುಳಿಸುವ ಪ್ರಯತ್ನ ಎಂದು ಹೇಳೊಕೆ ಆಗುತ್ತಾ? ಎಂದು ಹೇಳಿದರು.