ಉಡುಪಿ,ಫೆ 13 (MSP): ಕರಾವಳಿಯ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಬುಧವಾರದಂದು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಕೃಷ್ಣನದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮಠದ ಗೋಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದ ಮೋದಿ ಸಹೋದರ, ನಂತರ ಮಾಧ್ಯಮದವರೊಂದಿಗೆ ಮಾತನಾಡಿ, 'ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ಕೊಡುತ್ತಿದ್ದೇನೆ ,ಇದೊಂದು ಧಾರ್ಮಿಕ ಉದ್ದೇಶದ ಭೇಟಿ ಅಷ್ಟೇ. ಕಳೆದ ಐದು ವರ್ಷಗಳಿಂದ ಎನ್'ಡಿಎ ಸರಕಾರ ಉತ್ತಮ ಕೆಲಸ ಮಾಡಿದೆ. ದೇಶದ ಜನತೆ ಎನ್ ಡಿ ಎ ಕಾರ್ಯವೈಖರಿ ಸಂತುಷ್ಟರಾಗಿದ್ದಾರೆ ಎಂದರು.
ಸ್ವಾತಂತ್ರ್ಯಾನಂತರ ಭಾರತವನ್ನು ಸಮರ್ಥವಾಗಿ ವಿಶ್ವ ಗುರುತಿಸಲು ಸಾಧ್ಯವಾಗಿರಲಿಲ್ಲ ಆದರೆ ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡಿದ್ದು ಮೋದಿ ನೇತೃತ್ವದ ಎನ್ ಡಿ ಎ ಸರಕಾರದ ಸಾಧನೆಯಾಗಿದೆ. ಇಂತಹ ಹಲವು ಕಾರಣಕ್ಕಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ ಎಂದು ಸಹೋದರ ಮೋದಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.
ನಾನು ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದೆ ಅನ್ನೋದು ಮಹಾ ಸುಳ್ಳು. ಸಹೋದರ ನರೇಂದ್ರ ಮೋದಿಯನ್ನು ಬಿಟ್ಟು ನಾನ್ಯಾಕೆ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಲಿ? ಮಮತಾ ಬ್ಯಾನರ್ಜಿಯಲ್ಲಿ ಅಂತಾದ್ದೇನಿದೆ, ನಾನು ಯಾವತ್ತೂ ಸಹೋದರ ಮೋದಿಯನ್ನು ಟೀಕಿಸಿರಲಿಲ್ಲ ಎಂದು ವದಂತಿ ಹರಡಿದ್ದ ಬಗ್ಗೆ ಪ್ರಹ್ಲಾದ ಮೋದಿ ಉತ್ತರ ನೀಡಿದರು.
ಪ್ರಿಯಾಂಕ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಬಹಳಷ್ಟು ಪ್ರಿಯಾಂಕಾಗಳಿದ್ದಾರೆ. ಒಬ್ಬ ಪ್ರಿಯಾಂಕಾ ಬಂದರೆ ಏನಾಗುತ್ತೆ? ಎಂದು ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆ ಲೇವಡಿ ಮಾಡಿದರು.