ನವದೆಹಲಿ, ಫೆ 14(MSP): ಬಿಜೆಪಿ ವಿರೋಧಿ ಮಹಾಘಟಬಂಧನದ ಪ್ರಮುಖ ಪಕ್ಷಗಳಲ್ಲಿ ಒಂದಾದ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಬುಧವಾರ ಪ್ರಧಾನಿ ಮೋದಿಯನ್ನು ಶ್ಲಾಘಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು ಅತ್ತ ಪ್ರಧಾನಿ ನರೇಂದ್ರ ಮೋದಿ ಮತ್ತೇ ಪ್ರಧಾನಿಯಾಗದಂತೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಎಸ್ಪಿ ನಾಯಕಿ ಮಯಾವತಿ ಅವರೊಂದಿಗೆ ಸೇರಿ ಮಹಾಘಟಬಂಧನ್ ರಚನೆ ಮಾಡಿದ್ದರೆ ಇತ್ತ ಅಖಿಲೇಶ್ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಮಾತ್ರ ’2019ರಲ್ಲೂ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿಯಾಗಲಿ, ಅಂತಹ ತಾಕತ್ತು ಇರುವುದು ಅವರೊಬ್ಬರಿಗೆ ' ಎಂದು ಸಂಸತ್ ಸದನದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅವರು ಎಲ್ಲರನ್ನೂ ಜತೆಯಾಗಿಸಿ ಕೊಂಡುಹೋಗುವ ಮೋದಿ ನಾಯಕತ್ವ ಗುಣವನ್ನು ನಾನು ಅಭಿನಂದಿಸುತ್ತೇನೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಶುಭ ಕೋರುತ್ತೇನೆ.ಲೋಕಸಭೆಯ ಎಲ್ಲಾ ಸದಸ್ಯರು ಮತ್ತೆ ಆಯ್ಕೆಯಾಗಿ ಬರಲಿ ಎಂದು ಹಾರೈಸುತ್ತೇನೆ ಎಂದರು. ಈ ಸಂದರ್ಭ ಎನ್ ಡಿ ಎ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದ್ರೆ ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಮುಲಾಯಂ ಹಾರೈಕೆಗೆ ಅಭಾರಿಯಾಗಿರುತ್ತೇನೆಂದರು.
ಮುಲಾಯಂ ಸಿಂಗ್ ಈ ಹೇಳಿಕೆ ನೀಡುವಾಗ ಅವರ ಪಕ್ಕದಲ್ಲೇ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕುಳಿದ್ದರು. ಈ ಸಂದರ್ಭ ಮುಲಾಯಂ ಸಿಂಗ್ ಅವರ ಅಚ್ಚರಿದಾಯಕ ಹೇಳಿಕೆ ಅವರಿಗೆ ಇರುಸುಮುರುಸು ಉಂಟುಮಾಡಿತು.