ಮಂಡ್ಯ, ಫೆ 15(MSP): ಜಮ್ಮುವಿನ ಪುಲ್ವಾಮದಲ್ಲಿ ಗುರುವಾರ ನಡೆದ ಜೈಶ್ ರಕ್ಕಸರ ದಾಳಿಯಲ್ಲಿ ಹುತಾತ್ಮರಾದ 42 ಯೋಧರ ಪೈಕಿ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ವೀರ ಯೋಧ ಗುರು ಎಚ್. ಅವರ ವೀರಮರಣವನ್ನಪ್ಪಿದ್ದಾರೆ. ಇವರು ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಕೃಷಿಕ ಹೊನ್ನಯ್ಯ ಅವರ ಪುತ್ರರಾಗಿದ್ದಾರೆ. ಆರ್ ಪಿಎಫ್ನ 82ನೇ ಬೆಟಾಲಿಯನ್ನಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು 10 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.
ಉಗ್ರ ದಾಳಿಯಲ್ಲಿ ಯೋಧ ಗುರು ವೀರಮರಣವನ್ನಪ್ಪಿದ್ದ ಮೃತಪಟ್ಟ ಸುದ್ದಿ ಗುರು ಅವರ ಮನೆಗೆ ಮುಟ್ಟುತ್ತಿದ್ದಂತೆ ಅವರ ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 'ನನ್ನವರು ನನಗೆ ಬೇಕು' ಎನ್ನುತ್ತಾ ಗುರು ಅವರ ಪತ್ನಿ ಕಲಾವತಿ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತೆ ಮಾಡಿತ್ತು.
ಯೋಧ ಗುರು ಅವರು ಕೇವಲ 10 ತಿಂಗಳ ಹಿಂದೆ ಗುಡಿಗೆರೆ ಕಾಲನಿಯ ಕಲಾವತಿ ಅವರನ್ನು ಮದುವೆಯಾಗಿದ್ದರು. ವೀರಮರಣವನ್ನಪ್ಪಿದ ದಿನದಂದು ಬೆಳಗ್ಗೆ ಯೋಧ ಗುರು ತಮ್ಮ ಪತ್ನಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಕಲಾವತಿ ಅವರಿಗೆ ತಮ್ಮ ಪತಿಯೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಸಂಜೆ ಕಲಾವತಿ ತಾವೇ ಪತಿಗೆ ಕರೆ ಮಾಡಿದ್ರು. ಆದರೆ ಆ ಕಡೆಯಿಂದ ಕರೆ ಸ್ವೀಕಾರವಾಗಿರಲಿಲ್ಲ. ವಿಧಿಯಾಟ ಬೇರೆಯೇ ಇತ್ತು, ಸ್ವಲ್ಪ ಸಮಯದಲ್ಲೇ ಪುಲ್ವಾಮದಲ್ಲಿ ಸೇನಾ ವಾಹನದ ಮೇಲೆ ಉಗ್ರದಾಳಿಯಾಗಿದೆ ಎನ್ನುವ ಸುದ್ದಿಯೊಂದಿಗೆ ಯೋಧ ಗುರು ಹುತಾತ್ಮರಾಗಿರುವ ಸುದ್ದಿಯೂ ಬಿತ್ತು.