ಸಿಂಧನೂರು, ಫೆ 15(MSP): ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಕ್ಲರ್ಕ್ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ. ಅವರು ಗುರುವಾರ ಸಿಂಧನೂರಿನಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಹುಲ್ ಬಾಬು ಹೇಳಿದ ಕಡತಕ್ಕೆ ಸಹಿ ಹಾಕೋ ಕಾಂಗ್ರೆಸ್ ಪಕ್ಷದ ಕ್ಲರ್ಕ್ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರನ್ನು ಜನರು ಆಯ್ಕೆ ಮಾಡಿಲ್ಲ, ಅವರು ಕೇವಲ ರಾಹುಲ್ ಗಾಂಧಿ ಅವರ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಚಾರವನ್ನು ಕುಮಾರಸ್ವಾಮಿ ಸ್ವತಃ ಹೇಳಿಕೊಂಡಿದ್ದಾರೆ. ಹೀಗಾಗಿ ಜನರಿಂದ ಆಯ್ಕೆಯಾಗದ ಮುಖ್ಯಮಂತ್ರಿ ಜನರಿಗೆ ಜವಾಬ್ದಾರರಾಗಿರುವ ಆಡಳಿತ ನೀಡುತ್ತಿಲ್ಲ . ಅವರು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಹೇಳಿದ ಪತ್ರಕ್ಕೆ ಸಹಿ ಹಾಕುವ ಸಂಕಷ್ಟದಲ್ಲಿದ್ದಾರೆ.
ಇಷ್ಟಾದರೂ ಕುಮಾರಸ್ವಾಮಿಯವರಿಗೆ ಅಧಿಕಾರ ಆಸೆ, ಹೀಗಾಗಿ ಅವರು ಕುಟುಂಬ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಎರಡೂ ಕುಟುಂಬಗಳನ್ನು ಉಳಿಸಲು ಶ್ರಮಿಸುತ್ತಿದ್ದಾರೆ ವಿನಾಃ ಜನರಿಗಾಗಿ ಅಲ್ಲ ಎಂದು ಟೀಕಿಸಿದರು.