ನವದೆಹಲಿ, ಫೆ 15(MSP): ಉಗ್ರರ ದಾಳಿಯಿಂದಾಗಿ ವೀರಮರಣವನ್ನಪ್ಪಿದ ಸಿಆರ್ಪಿಎಫ್ ಯೋಧರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಗೌರವ ಸಮರ್ಪಿಸಿದರು. ದೆಹಲಿ–ವಾರಾಣಸಿ ಸಂಚರಿಸಲಿರುವ ವಂದೇ - ಭಾರತ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡುವ ಮುನ್ನ ಹುತಾತ್ಮರಾದ ಯೋಧರಿಗೆ ಎರಡು ನಿಮಿಷಗಳ ಕಾಲ ಮೌನಾಚರಿಸಿದರು.
ಇದೇ ವೇಳೆ ದಾಳಿಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಮ್ಮ ರಕ್ಷಣಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರ ಶೌರ್ಯದ ಬಗ್ಗೆ ನಮಗೆ ನಂಬಿಕೆ ಇದೆ. ಒಂದು ವೇಳೆ ನೆರೆಯ ದೇಶ ಈ ದಾಳಿಯ ಮೂಲಕ ಭಾರತವನ್ನು ದುರ್ಬಲಗೊಳಿಸಬಹುದು ಎಂದು ಭಾವಿಸಿದ್ರೆ ಆ ವಿಚಾರವನ್ನು ನೆರೆಯ ದೇಶ ಮರೆತುಬಿಡುವುದು ಒಳ್ಳೆಯದು. ನಮ್ಮ ಭದ್ರತಾ ಪಡೆಯ ಮೇಲೆ ಉಗ್ರರು ದಾಳಿ ಮಾಡಿ, ಬಹುದೊಡ್ಡ ತಪ್ಪು ಮಾಡಿದ್ದಾರೆ. ಇದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಉಗ್ರರ ಈ ಪೈಶಾಚಿಕ ಕೃತ್ಯದಿಂದ ವೀರಯೋಧರು ಹುತಾತ್ಮರಾಗಿದ್ದು ನೋಡಿ ನಮ್ಮೆಲ್ಲರ ರಕ್ತ ಕುದಿಯುತ್ತಿರುತ್ತದೆ ಎಂದು ನನಗೆ ಗೊತ್ತಿದೆ. ಆದರೆ ಇದು ಭಾವನಾತ್ಮಕ ಮತ್ತು ಸೂಕ್ಷ್ಮವಾದ ಸಮಯ. ಆಡಳಿತ ಅಥವಾ ವಿರೋಧ ಪಕ್ಷವಿರಲಿ ಈ ಸಮಯ ಎಲ್ಲರೂ ರಾಜಕೀಯ ಮಾಡಬಾರದು ಆದರೆ ನಮ್ಮ ದೇಶದ ಎಲ್ಲರೂ ಜೊತೆಗೂಡಬೇಕು ಎಂದು ಕರೆ ನೀಡಿದರು.