ಚಂಡೀಗಢ, ಫೆ 16(SM): ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಕೃತ್ಯಕ್ಕೆ ಸಂಬಂಧಪಟ್ಟಂತೆ, ಪಂಜಾಬ್ ನ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ದು ಪಾಕ್ ಪರ ಬ್ಯಾಟ್ ಬೀಸಿದಂತಿದೆ. ಸಿಆರ್ ಪಿಎಫ್ ಯೋಧರ ಮೇಲೆ ನಡೆದ ದಾಳಿಗೆ, ಪಾಕಿಸ್ತಾನವನ್ನು ದೂಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುವ ಮೂಲಕ ದೇಶದ ಜನತೆಯ ಕೆಂಗಣ್ಣಿಗೆ ಗುರುಯಾಗಿದ್ದಾರೆ.
ಭಯೋತ್ಪಾದನಾ ಕೃತ್ಯಕ್ಕೆ ಕುಮ್ಮುಕ್ಕು ಸಿಗುತ್ತಿರುವುದೇ ಪಾಕಿಸ್ತಾನದಲ್ಲಿ. ಮೊದಲು ಅವರಿಗೆ ತಕ್ಕ ಉತ್ತರವನ್ನು ನೀಡಬೇಕಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಹೇಳಿತ್ತು. ಆದರೆ, ಅದೇ ಸರಕಾರದ ಸಂಪುಟದಲ್ಲಿನ ಮಂತ್ರಿ ನವಜೋತ್ ಸಿದ್ದು ಸರಕಾರದ ಹೇಳಿಕೆಗೆ ತದ್ವಿರುದ್ಧವಾದಂತಹ ಹೇಳಿಕೆ ನೀಡುವ ಮೂಲಕ ವಿವಾದ ಬಾಂಬ್ ಹಾಕಿದ್ದಾರೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅವರು, ಯಾರೋ ಒಬ್ಬ ಮಾಡಿದ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶವನ್ನು ದೂಷಿಸುವುದು ತಪ್ಪು. ಇದಕ್ಕೆ ಸಂಬಂಧಪಟ್ಟ ಸಂಘಟನೆಯನ್ನೋ ಅಥವಾ ವ್ಯಕ್ತಿಯನ್ನು ದೂಷಿಸಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಾಕ್ ತಪ್ಪು ಮಾಡಿಲ್ಲ ಎಂಬುವುದಾಗಿ ಸಮರ್ಥಿಸಿಕೊಂಡಿದ್ದಾರೆ.
ಸಿದ್ದು ಹೇಳಿಕೆಗೆ ಇದೀಗ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.