ಮಂಡ್ಯ ಫೆ16: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರಿಗೆ ಹುಟ್ಟೂರಾದ ಮಂಡ್ಯದಲ್ಲಿ ಜನರು ಭಾವನಾತ್ಮಕ ಅಶ್ರುತರ್ಪಣ ಸಲ್ಲಿಸಿದರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಧೀರ ಯೋಧನನ್ನು ನೋಡಲು ಇಂದು ಬೆಳಗ್ಗಿನಿಂದಲೇ ಮಂಡ್ಯ ಹೊರವಲಯದ ಜನರು ಮದ್ದೂರಿಗೆ ಸಾವಿರಾರು ಸಂಖೆಯಲ್ಲಿ ಆಗಮಿಸಿದ್ದರು. ಗುರು ಅವರ ಪಾರ್ಥೀವ ಶರೀರ ಹೊತ್ತ ಮಿಲಿಟರಿ ವಾಹನದಲ್ಲಿ ಬೆಂಗಳೂರು-ಮೈಸೂರು ದಾರಿಯಲ್ಲಿ ಸಾಗುತ್ತಿದ್ದಂತೆ ಮಹಿಳೆಯರು ಸೇರಿದಂತೆ ಅಸಂಖ್ಯಾತರು ರಸ್ತೆಗಳ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದರು. ಪಾರ್ಥಿವ ಶರೀರ ಹತ್ತಿರ ಬರುತ್ತಿದ್ದಂತೆಯೇ ’ಗುರು ಚಿರಾಯುವಾಗು’ಎಂಬ ಘೋಷಣೆ ಮುಗಿಲು ಮುಟ್ಟಿತು.
ಕುಂಬಳಗೂಡು ಹಾಗೂ ವಂಡರ್ ಲಾ ಗೇಟ್ ಬಳಿ ಅಂತಿಮ ದರ್ಶನಕ್ಕಾಗಿ ಗುರು ಅವರಿದ್ದ ವಾಹನವನ್ನು ಕೆಲ ಕಾಲ ನಿಲ್ಲಿಸಲಾಗಿತ್ತು. ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ವ್ಯಾಪಾರಿಗಳು ಧೀರ ಯೋದನಿಗೆ ನಮನ ಸಲ್ಲಿಸಿದರು. ರಸ್ತೆಯುದ್ದಕ್ಕೂ ಬಿಗಿ ಪೋಲಿಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.
ಸೇನೆಯ ವಿಶೇಷ ವಿಮಾನದಲ್ಲಿ ಆಗಮಿಸಿದ ಗುರು ಅವರ ಪಾರ್ಥೀವ ಶರೀರಕ್ಕೆ ರಾಜ್ಯ ಮುಖ್ಯಮಂತ್ರಿ ಕುಮಾರ ಸ್ವಾಮಿ ಸೇರಿದಂತೆ ಸರಕಾರ ಹಾಗೂ ರಾಜಕೀಯ ನಾಯಕರು ಅಪಾರ ಸಂಖ್ಯೆಯಲ್ಲಿ ಅಗಮಿಸಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ಗುರು ಅವರ ಕುಟುಂಬಕ್ಕೆ 25 ಲಕ್ಷಗಳ ಆರ್ಥಿಕ ನೆರವನ್ನು ಘೋಷಿಸಿದರು.