ವಿಜಯನಗರ, ಫೆ 17(MSP): ಕೆಲವರಿಗೆ ಧರ್ಮವಿರುವುದಿಲ್ಲ, ಅವರಿಗೆ ಕೇಡಕನ್ನುಂಟು ಮಾಡುವ ಧರ್ಮವನ್ನೇ ಅವರು ಪಾಲಿಸುತ್ತಿರುತ್ತಾರೆ, ದುಷ್ಕೃತ್ಯ, ವಿಧ್ವಂಸಕ ಕೃತ್ಯ ಗಳನ್ನು ಮಾಡುವುದೇ ಅವರ ಧರ್ಮವಾಗಿರುತ್ತದೆ ಎಂದು ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾರೇ ವಿವಾದಾತ್ಮಕ ಮಾತುಗಳನ್ನು ಆಡಿದರೂ ಅವರ ವಿರುದ್ದ ಕಠಿಣ ಕ್ರಮ ಖಂಡಿತಾ. ಅದು ಯಾರೇ ಆಗಿರಲಿ, ವಿವಾದಾತ್ಮಕ ಮತ್ತು ಪ್ರಚೋದನಾತ್ಮಕ ಹೇಳಿಕೆ ನೀಡಿದೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು, ಅದು ಅನಂತ್ ಕುಮಾರ್ ಹೆಗಡೆ, ಭಗವಾನ್, ಪ್ರತಾಪ್ ಸಿಂಹ ಹೀಗೆ ಯಾರೇ ಇರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಇದೇ ವೇಳೆ , ಕಾಶ್ಮೀರದಲ್ಲಿ ಯೋಧರ ಮೇಲೆ ಉಗ್ರರ ಪೈಶಾಚಿಕ ಕೃತ್ಯವನ್ನು ಸಮರ್ಥಿಸಿಕೊಂಡು ವಾಟ್ಸ್ ಆಪ್ ಸ್ಟೇಟಸ್ ಹಾಕಿದ ಕಾಶ್ಮೀರ ಮೂಲದ ಯುವಕನ ವಿಚಾರಣೆ ನಡೆಸಲಾಗುತ್ತದೆ ಎಂದರು. ಆತನನ್ನು ತಾಹೀರ್ ಲತೀಫ್ (23) ಎಂದು ಗುರುತಿಸಲಾಗಿದ್ದು, ರೇವಾ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಬಗ್ಗೆ ಬಾಗಲೂರು ಪೊಲೀಸರು ಕೇಸು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದರು.