ಬೆಳಗಾವಿ,ಫೆ 17(MSP): ಉಗ್ರ ದಾಳಿಯಲ್ಲಿ ಭಾರತೀಯ ಯೋಧರನ್ನು ಕಳೆದುಕೊಂಡು, ಭಾರತವೇ ಶೋಕಸಾಗರದಲ್ಲಿ ಮುಳುಗಿದ್ರೆ, ಅತ್ತ ಬೆಳಗಾವಿಯ ಸವದತ್ತಿ ತಾಲೂಕಿನ ಕಡಬಿ ಶಿವಾಪೂರ ಗ್ರಾಮದ ನಿವಾಸಿ, ಖಾಸಗಿ ಶಾಲೆಯ ಶಿಕ್ಷಕಿ ಜಿಲೆಕಾ ನಜೀರಸಾಬ್ ಮಮದಾಪುರ (25) ಮಾತ್ರ ತಮ್ಮ ಫೇಸ್ ಬುಕ್ ಹಾಗೂ ವಾಟ್ಸಪ್ ಗಳಲ್ಲಿ ,’ಪಾಕಿಸ್ತಾನ ಜಿಂದಾಬಾದ್’ ಎಂದು ದೇಶ ವಿರೋದಿ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ಆಕ್ರೋಶಗೊಂಡ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಶಿಕ್ಷಕಿ ವಿರುದ್ದ ರೊಚ್ಚಿಗೆದ್ದು ಆಕೆಯ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಮಾತ್ರವಲ್ಲ ಆಕೆಯ ಮನೆಗೂ ಬೆಂಕಿ ಕೊಟ್ಟಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿ ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯ ತೀವ್ರತೆ ಅರಿತ ಆಕೆಯ ಕುಟುಂಬಸ್ಥರು ಆಕೆಯನ್ನು ಪಕ್ಕದ ಗ್ರಾಮದ ಹೊಟೇಲ್ ವೊಂದರಲ್ಲಿ ಬಚ್ಚಿಟ್ಟರು. ಸುದ್ದಿ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಹಬ್ಬಿದ್ದರಿಂದ ಪರಿಸ್ಥಿತಿಯ ತೀವ್ರತೆ ಅರಿತು ಎಚ್ಚೆತ್ತ ಪೊಲೀಸರು ಯುವತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇಶ ವಿರೋಧಿ ಮನಸ್ಥಿತಿ ಹೊಂದಿದ ಯುವತಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಸ್ಥಳೀಯರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬೇಟಿ ನೀಡಿದ ಶಾಸಕ ಆನಂದ ಮಾಮನಿ, ದೇಶದ್ರೋಹಿ ಚಟುವಟಿಯನ್ನು ಸಹಿಸುವುದಿಲ್ಲ , ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಇನ್ನು ಪೊಲೀಸರು ಈ ಸಂದರ್ಭ ಮನೆಗೆ ಬೆಂಕಿ ಹಚ್ಚಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.