ಹೈದರಾಬಾದ್ , ಫೆ 17(MSP): ಶಾಪಿಂಗ್ ಮಾಲೊಂದು 10 ರೂಪಾಯಿ ಗೆ ಸೀರೆ ಅಫರ್ ನೀಡಿದ ಪರಿಣಾಮ ಏಕಾಏಕಿ ಮಹಿಳೆಯರೆಲ್ಲರೂ ಮಾಲ್ ಗೆ ನುಗ್ಗಿ ಕಾಲ್ತುಳಿದಂಥ ಪರಿಸ್ಥಿತಿ ಉಂಟಾಗಿ ಕೊನೆಗೆ ಪೊಲೀಸರು ಅನಿವಾರ್ಯವಾಗಿ ಮಾಲ್ ಸೀಜ್ ಮಾಡಿದ ಘಟನೆ ಹೈದರಾಬಾದ್ ನಲ್ಲಿ ಫೆ.16 ರಂದು ನಡೆದಿದೆ.
ಹೈದರಾಬಾದ್ ನಗರದಲ್ಲಿರುವ ಸಿದ್ದಪೇಟಿನಲ್ಲಿನ ಶಾಪಿಂಗ್ ಮಾಲ್ ಸಿಎಂಆರ್ ಮಾಲ್ ನಲ್ಲಿ ಗ್ರಾಹಕರೂ ಅದರಲ್ಲೂ ಮಹಿಳೆಯರಿಗೆ ನಿರೀಕ್ಷೆಗೆ ಮೀರಿದ ಆಫರ್ ನೀಡಲಾಗಿತ್ತು. ಅದೇನೆಂದರೆ 10 ರೂ ಗೆ ಒಂದು ಸೀರೆ. ಸೀರೆ ಎಂದ ಮೇಲೆ ನೀರೆಯರು ಬಿಡಬೇಕೆ? ಈ ವಿಚಾರ ಕ್ಷಣ ಮಾತ್ರದಲ್ಲಿ ಹಬ್ಬಿ ಮಹಿಳೆಯರ ಸಾಲು ಸಾಲೇ ಮಾಲ್ ಕಡೆ ಹರಿದುಬಂತು. ಏಕಾಏಕಿ ಹೆಣ್ಣುಮಕ್ಕಳ ದಂಡೇ ಹರಿದುಬಂದಿದ್ದರಿಂದ ಕಾಲ್ತುಳಿದಂಥ ಪರಿಸ್ಥಿತಿ ಕೂಡ ನಿರ್ಮಾಣವಾಯಿತು.
ಒಂದೇ ಬಾರಿ ಜನಸಾಗರವೇ ನುಗ್ಗಿದ್ದರಿಂದ ಕಾಲ್ತುಳಿದಂಥ ಪರಿಸ್ಥಿತಿಯಿಂದ ಉಂಟಾಗಿ ಹಲವಾರು ಜನ ಗಾಯಗೊಂಡಿದ್ದಾರೆ. ಅಲ್ಲದೆ ಈ ಸಂದರ್ಭ ಕೈಚಳಕ ತೋರಿದ ಕಳ್ಳರು ಮಹಿಳೆಯೊಬ್ಬರಿಂದ ಚಿನ್ನದ ಸರ , ಆರು ಸಾವಿರ ನಗದು ಹಾಗೂ ಡೆಬಿಟ್ ಕಾರ್ಡ್ ನ್ನು ಎಗರಿಸಿದ್ದಾರೆ. ಕೆಲವರು ಮಾಲ್ ಅಫರ್ ನೀಡಿದ 10 ರೂ. ಸೀರೆ ಕೊಳ್ಳಲು ಎಂದು ಬಂದು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
೧೦ ರೂಪಾಯಿ ಅಫರ್ ನಿಂದ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಕಂಡ ಪೊಲೀಸರು ,ಮಾಲ್ ಅನ್ನು ಸೀಜ್ ಮಾಡಿದ್ರು.