ನವದೆಹಲಿ,ಫೆ 17(MSP): ಪುಲ್ವಾಮ ಉಗ್ರರ ಆತ್ಮಾಹುತಿ ದಾಳಿಗೆ ದೇಶದಾದ್ಯಂತ ಪ್ರತೀಕಾರ ಪ್ರತಿಕ್ರಿಯೆ ಕೇಳಿಬರುತ್ತಿದ್ದರೆ, ಯುವಕನೊಬ್ಬ ಪಾಕ್ ವಿರುದ್ದ ಸೈಬರ್ ಯುದ್ದ ಸಾರಿ ಪಾಕ್ ಸರ್ಕಾರವನ್ನು ಬೆಚ್ಚಿಬೀಳಿಸುವಂತೆ ಮಾಡುತ್ತಿದ್ದಾನೆ.
ಏಕಾಂಗಿ ಸೈನಿಕನಂತೆ ಪಾಕ್ ವಿರುದ್ದ ಹೋರಾಟಕ್ಕಿಳಿದಿರುವ ಅಂಶುಲ್ ಸಕ್ಸೇನಾ ಅನ್ನೋ ಯುವಕ, ’ಪಾಪಿ ಪಾಕ್’ಗೆ ಸಾಕಷ್ಟು ಬಿಸಿ ಮುಟ್ಟಿಸಿದ್ದಾನೆ. ಪುಲ್ವಾಮ ಉಗ್ರರ ದಾಳಿಗೆ ಪ್ರತಿಕಾರದ ಉತ್ತರವಾಗಿ ಈಗಾಗಲೇ ಪಾಕಿಸ್ತಾನ ಸರ್ಕಾರಕ್ಕೆ ಸಂಬಂಧಪಟ್ಟ ಹಲವು ಪ್ರಮುಖ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ’ಸೈಬರ್ ಸರ್ಜಿಕಲ್ ದಾಳಿ ’ ನಡೆಸಿ ಪಾಕಿಸ್ತಾನದ ಚಳಿ ಬಿಡಿಸಿದ್ದಾನೆ. ಪಾಕ್ ಸರಕಾರದ ಕೆಲವು ಪ್ರಮುಖ ದಾಖಲೆಗಳು ಅಂಶುಲ್ ಕೈ ಸೇರಿದ್ದು, ಅತ್ತ ಕಡೆ ಹ್ಯಾಕ್ ಆಗಿರುವ ವೆಬ್ಸೈಟ್ ಸರಿಪಡಿಸಲು ಪಾಕಿಸ್ತಾನ ಹೆಣಗಾಡುತ್ತಿದೆ.
ಇಷ್ಟು ಮಾತ್ರವಲ್ಲ ಅಂಶುಲ್ ಸಕ್ಸೇನಾ, ಯಾರೆಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರ ಪರ ಕನಿಕರ ತೋರಿಸಿ ನಮ್ಮ ಸೈನಿಕರ ಮಹಾಬಲಿದಾನವನ್ನು ಕಿಚಾಯಿಸಿದ ಜನಗಳ ಮುಖವಾಡವನ್ನು ಕಳಚಿ ಸರಿಯಾಗಿ ಶಿಕ್ಷೆಯಾಗುವಂತೆ ಮಾಡಿದ್ದಾನೆ.
ಎಥಿಕಲ್ ಹ್ಯಾಕರ್ ಆಗಿರುವ ಅಂಶುಲ್ ಈ ಕುರಿತು ಟ್ವೀಟ್ ಮತ್ತು ಫೇಸ್ಬುಕ್ ಪೋಸ್ಟ್ ಮಾಡಿದ್ದು, ಪಾಕಿಸ್ತಾನ ವಿರುದ್ಧ ಯುದ್ಧಭೂಮಿಯಲ್ಲಿ ಸೈನಿಕನಂತೆ ನನಗೆ ಹೋರಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಸೈನಿಕರ ಬಲಿದಾನಕ್ಕೆ ತಕ್ಕ ಪ್ರತೀಕಾರ ಆಗಬೇಕಿದೆ. ಇದಕ್ಕಾಗಿ ಇದು ನನ್ನ ಸಣ್ಣ ಪ್ರಯತ್ನ. ಈಗಷ್ಟೇ ಆರಂಭ, ಪಾಪಿ ಪಾಕಿಸ್ತಾನಕ್ಕೆ ಮುಂದೆ ಇನ್ನೂ ಕಾದಿದೆ ಎಂದಿದ್ದಾರೆ.
ಅಂಶುಲ್ ಸಕ್ಸೇನಾ ಅವರಿಗೆ ನೆಟ್ಟಿಗರು ಸಾಮಾಜಿಕ ಜಾಲತಾಣದ ಸೈನಿಕ ಎಂದು ಕೊಂಡಾಡುತ್ತಿದ್ದು ದೇಶದೆಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇನ್ನೊಂದೆಡೆ ದೇಶ ವಿರೋಧಿ, ಪಾಕಿಸ್ತಾನ ಪರವಾಗಿ, ಉಗ್ರ ಪರವಾದ ಸ್ಟೇಟಸ್, ಪೋಸ್ಟ್ ಹಾಕಿ ಯೋಧರ ಸಾವನ್ನು ಸಂಭ್ರಮಿಸಿದ್ದ ವ್ಯಕ್ತಿಗಳನ್ನು ಹುಡುಕಿ ಅವರಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ. ನೀವು ಯಾರಿಂದಲೂ ಬಚಾವ್ ಆಗಬಹುದು ಆದರೆ ನನ್ನ ಸ್ನೈಪರ್ ನ ಗುರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ದೇಶದ್ರೋಹಿ ಯಾರೊಬ್ಬರನ್ನೂ ಬಿಡೋದಿಲ್ಲ ಎಂದು ದೇಶದ್ರೋಹಿಗಳ ವಿರುದ್ದ ಅಂಶುಲ್ ಅಬ್ಬರಿಸಿದ್ದಾರೆ.