ಚಿಕ್ಕಮಗಳೂರು, ಫೆ 17(SM): ಅರಣ್ಯ ಇಲಾಖೆ ಚೆಕ್ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ನಕ್ಸಲ್ ಪೀಡಿತ ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆ ಹಲವಾರು ಕುತೂಹಲಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಸರೀಕಲ್ ಬಳಿ ಘಟನೆ ನಡೆದಿದೆ. ಭಾನುವಾರ ಮುಂಜಾನೆಯ ವೇಳೆ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ಚೆಕ್ಪೋಸ್ಟ್ಗೆ ಹಾನಿಯಾಗಿದೆ.
ಕತ್ತಲಿನಲ್ಲಿದ್ದ ದುಷ್ಕರ್ಮಿಗಳು 6 ಪೆಟ್ರೋಲ್ ಬಾಂಬ್ಗಳನ್ನು ಚೆಕ್ಪೋಸ್ಟ್ನತ್ತ ಎಸೆದಿದ್ದಾರೆ. ಅವುಗಳ ಪೈಕಿ ಒಂದು ಬಾಂಬ್ನಿಂದ ಬೆಂಕಿ ಹೊತ್ತಿಕೊಂಡಿದೆ. ಕೆಲವು ಕಾಗದ ಪತ್ರಗಳು ಬೆಂಕಿಗಾಹುತಿಯಾಗಿವೆ. ಇನ್ನು ಘಟನೆ ನಡೆಯುತ್ತಿದ್ದಂತೆ ಶಬ್ದ ಕೇಳಿ ಅಲ್ಲಿದ್ದ ಸಿಬ್ಬಂದಿಗಳು ಹೊರ ಬಂದು ನೋಡುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯಾರು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂಬುವುದು ಇನ್ನೂ ಕೂಡ ಸ್ಪಷ್ಟಗೊಂಡಿಲ್ಲ.
ಘಟನೆಯ ಬಳಿಕ ಹಿರಿಯ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸೇರಿಂದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.