ಬೆಂಗಳೂರು,ಫೆ 18 (MSP): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ 55 ಯೋಧರು ಹುತಾತ್ಮರಾದ ಘಟನೆಯ ಬಗ್ಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮಾಡಿದ್ದ ಟ್ವೀಟ್ ಗೆ ಐಜಿಪಿ ಡಿ. ರೂಪಾ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ ಚೋಪ್ರಾ ಅವರಿಗೆ ರೂಪಾ ಅವರು ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
ನಟಿ ಪ್ರಿಯಾಂಕಾ ತಮ್ಮ ಟ್ವೀಟರ್ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದ ದಾಳಿ ನಿಜಕ್ಕೂ ಶಾಕ್ ತಂದಿದೆ. ಆದರೆ ಅದಕ್ಕೆ ದ್ವೇಷಿಸುವುದು ಉತ್ತರವಲ್ಲ.! ಹುತಾತ್ಮರಾದ ಸಿಆರ್ಪಿಎಫ್ ಜವಾನರ ಕುಟುಂಬ ಹಾಗೂ ಗಾಯಾಳು ಯೋಧರಿಗೆ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದರು.
’ದ್ವೇಷಿಸುವುದು ಉತ್ತರವಲ್ಲ ’ ಎಂಬ ಪ್ರಿಯಾಂಕಾ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು . ಈ ನಡುವೆ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಐಜಿಪಿ ಡಿ. ರೂಪಾ ಅವರು ಯೋಧರ ಮೇಲಿನ ದಾಳಿ ಕೇವಲ ಪ್ರೀತಿ-ದ್ವೇಷದ ಕಥೆಯಲ್ಲ. ಈ ದಾಳಿ ದೇಶದ ಮೇಲಿನ ದಾಳಿ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಒಂದು ದೇಶದ ಶಾಂತಿಯುತ ಅಸ್ತಿತ್ವದ ಮೇಲೆ ಅಕ್ರಮ ಶಕ್ತಿಗಳು ನಡೆಸುವ ದಬ್ಬಾಳಿಕೆಯ ದಾಳಿ ಎಂದು ಟ್ವೀಟ್ ಮಾಡಿದ್ದಾರೆ. ರೂಪಾ ಅವರ ಟ್ವೀಟ್ ಅನ್ನು ಸಾವಿರಾರು ಜನರು ಶೇರ್ ಮಾಡಿ,ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.