ನವದೆಹಲಿ, ಫೆ 18 (MSP):ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಖಂಡಿಸಿ ಕಾಸರಗೋಡು ಜಿಲ್ಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಕೇರಳ ರಾಜ್ಯದಾದ್ಯಂತ ಯುವ ಕಾಂಗ್ರೆಸ್ ಹರತಾಳ ನಡೆಸುತ್ತಿದ್ರೆ ಅತ್ತ ಕಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಯುವ ಕಾರ್ಯಕರ್ತರ ಹತ್ಯೆ ಮಾಡಿದ ಹಂತಕರನ್ನು ಶಿಕ್ಷೆಗೊಳಪಡಿಸದೆ ಕಾಂಗ್ರೆಸ್ ಪಕ್ಷ ವಿಶ್ರಾಂತಿ ಪಡೆಯುದಿಲ್ಲ ಎಂದು ಗುಡುಗಿದ್ದಾರೆ.
ಭಾನುವಾರ ರಾತ್ರಿ ಪೆರಿಯ ಕಲ್ಯೊಟ್ ನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (24) ಮತ್ತು ಶರತ್ ಲಾಲ್ (21)ರನ್ನು ಕೊಚ್ಚಿ ಕೊಲೆಗೈಯಲಾಗಿತ್ತು. ಬೈಕ್ ಗೆ ಡಿಕ್ಕಿ ಜೀಪು ಡಿಕ್ಕಿ ಹೊಡೆಸಿ ಬಳಿಕ ಮಾರಾಕಾಸ್ತ್ರದಿಂದ ಇಬ್ಬರನ್ನು ಕೊಚ್ಚಿ ತಂಡವು ಪರಾರಿಯಾಗಿದ್ದು, ಕೃಪೇಶ್ ಸ್ಥಳದಲ್ಲೇ ಮೃತಪಟ್ಟರೆ ಶರತ್ ಲಾಲ್ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದರು. ಘಟನೆಯಲ್ಲಿ ಸಿಪಿಎಂ ಕೈವಾಡ ಇದೆ ಎಂದು ಶಂಕಿಸಲಾಗಿದೆ.ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ’ ಯುವ ಕಾಂಗ್ರೆಸ್ ಸದಸ್ಯರ ಹತ್ಯೆಯಿಂದ ಕೇರಳದ ಕಾಸರಗೋಡಿನಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷ ಹತ್ಯೆಯಾದ ಕುಟುಂಬ ಸದಸ್ಯರ ಪರವಾಗಿ ನಿಲ್ಲಲಿದೆ. ಆದರೆ ಕೊಲೆಗಾರರಿಗೆ ತಕ್ಕ ಶಿಕ್ಷೆ ಆಗೋ ತನಕ ನಾವು ವಿಶ್ರಾಂತಿ ಪಡೆಯುವುದಿಲ್ಲ , ಎಂದು ಟ್ವೀಟ್ ಮಾಡಿ ಮೃತರ ಕುಟುಂಬಕ್ಕೆ ತೀರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡೂ ಪಕ್ಷದ 11 ಮಂದಿಯನ್ನು ಬೇಕಲ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನ ಕಳೆದು ಎರಡು ದಿನಗಳ ಹಿಂದೆ ಇವರು ಬಿಡುಗಡೆಗೊಂಡಿದ್ದರು. ಪ್ರಕರಣದಲ್ಲಿ ಹತ್ಯೆಯಾದ ಶರತ್ ಲಾಲ್ ಕೂಡಾ ಭಾಗಿಯಾಗಿದ್ದನು. ಈ ದ್ವೇಷ, ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.