ಬೆಂಗಳೂರು, ಫೆ19 (MSP): ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಊರ್ಕೇನಹಳ್ಳಿ ಸಮೀಪ, ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳವಾರ ಬೆಳಗಿನ ಜಾವ ಅಪಘಾತಕ್ಕೀಡಾಗಿದ್ದು, ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಯುವಕರಿಬ್ಬರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಊರ್ಕೇನಹಳ್ಳಿ ಸಮೀಪ ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸುನೀಲ್ ಕುಮಾರ್(27) ಮತ್ತು ಶಶಿಕುಮಾರ್(28) ಸಾವಿಗೀಡಾಗಿದ್ದು, ಮತ್ತೋರ್ವನಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಎರಡು ಕಾರುಗಳಲ್ಲಿ 13 ಜನ ಗೆಳೆಯರು, ಪ್ರವಾಸಕ್ಕೆದು ತೆರಳಿದ್ದರು . ಇವರು ಶೃಂಗೇರಿ ಪ್ರವಾಸ ಮುಗಿಸಿ ಊರಿಗೆ ತೆರಳುತ್ತಿದ್ದ ಸಂದರ್ಭ ಮೂತ್ರ ವಿಸರ್ಜನೆಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾರುಗಳನ್ನು ನಿಲ್ಲಿಸಿ ಕೆಳಗಿಳಿದ್ದರು. ಇದೇ ಮಾರ್ಗದಲ್ಲಿ ಬಂದ ಸಿ.ಟಿ.ರವಿ ಅವರಿದ್ದ ಫಾರ್ಚುನರ್ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಸಂದರ್ಭ ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅಪಘಾತದಲ್ಲಿ ಶಾಸಕ ಸಿ.ಟಿ.ರವಿ ಸಹ ಗಾಯಗೊಂಡಿದ್ದಾರೆ.
ಅಪಘಾತ ನಡೆದ ತಕ್ಷಣ ಆಘಾತಕ್ಕೊಳಗಾದ ಶಾಸಕ ರವಿ ಸ್ವಲ್ಪ ಹೊತ್ತು ಸ್ಥಳದಲ್ಲಿದ್ದು ಬಳಿಕ ಮತ್ತೊಂದು ಕಾರಿನಲ್ಲಿ ಅವರು ಬೆಂಗಳೂರು ತಲುಪಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪೊಲೀಸರು ಕಾರು ವಶಕ್ಕೆ ಪಡೆದಿದ್ದಾರೆ.ಶವಗಳನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಇಬ್ಬರ ಸಾವಿಗೆ ಕಾರಣರಾದ ಶಾಸಕ ರವಿ ವಿರುದ್ದ ಐಪಿಸಿ ಸೆಕ್ಷನ್ 279, 337, 304 (ಎ) ಅಡಿಯಲ್ಲಿ ತುಮಕೂರಿನ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.