ಏರ್ ಷೋ ತಾಲೀಮು ವೇಳೆ ಅವಘಡ: 2 ಯುದ್ಧ ವಿಮಾನಗಳ ಮುಖಾಮುಖಿ ಡಿಕ್ಕಿ, ಓರ್ವ ಪೈಲಟ್ ಸಾವು
Tue, Feb 19 2019 02:56:19 PM
ಬೆಂಗಳೂರು, ಫೆ19 (MSP):ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ರಿಹರ್ಸಲ್ ನಿರತವಾಗಿದ್ದ ಎರಡು ಯುದ್ಧವಿಮಾನಗಳು ಪರಸ್ಪರ ಢಿಕ್ಕಿಯಾಗಿ ಪತನವಾಗಿದ್ದು ಪರಿಣಾಮ ಓರ್ವ ಪೈಲೆಟ್ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಘಟನೆಯಲ್ಲಿ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಳೆಯಿಂದ ನಡೆಯಬೇಕಾಗಿದ್ದ ಏರ್ ಶೋ ಗಾಗಿ ತಾಲೀಮು ನಿರತರಾಗಿದ್ದ ಸೂರ್ಯ ಕಿರಣ್ ಜೆಟ್ ವಿಮಾನಗಳು ಇಂದು ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದು ಪತನವಾಗಿದೆ. ವಾಯುನೆಲೆಯ ಕಾಂಪೌಂಡ್ ಸನಿಹ ವಿಮಾನಗಳು ಬೆಂಕಿ ಹೊತ್ತಿಕೊಂಡು ಪತನವಾಗಿದ್ದು, ಬೆಂಕಿ ಕೆನ್ನಾಲಿಗೆಗೆ ಸಮೀಪದ ಒಂದು ಮನೆಯ ಗೋಡೆ ಹಾಗೂ ಹಸುವಿನ ಕೊಟ್ಟಿಗೆಗೆ ಬೆಂಕಿ ಬಿದ್ದಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಪೈಲೆಟ್ ಗಳು ಪ್ಯಾರಾಚ್ಯೂಟ್ ಮೂಲಕ ಕೆಳಗಿಳಿಯಲು ಪ್ರಯತ್ನಿಸಿದರಾದರೂ ಈ ಪೈಕಿ ಓಬ್ಬ ಪೈಲೆಟ್ ನೆಲಕ್ಕೆ ಬಿದ್ದರೆಂದು ಅಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ವಾಯುಪಡೆ ಮತ್ತು ರಕ್ಷಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಗಾಯಗೊಂಡಿರುವ ಇನ್ನೋರ್ವ ಪೈಲಟ್ ನನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಢಿಕ್ಕಿ ಬಳಿಕ ಎರಡೂ ಯುದ್ಧ ವಿಮಾನಗಳು ಹೊತ್ತಿ ಉರಿದ ಕಾರಣ ಆ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಏರ್ ಶೋಗೆ ಒಂದು ದಿನ ಬಾಕಿಯಿರುವಾಗಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.