ಮಂಗಳೂರು, ಫೆ 19(SM): ಸಿ.ಟಿ. ರವಿ ಮದ್ಯಪಾನ ಮಾಡಿದ್ದರು ಅನ್ನೋದು ಸುಳ್ಳು, ಈ ವಿಚಾರವನ್ನು ನಾನು ನಂಬಲಾರೆ. ವೈಯಕ್ತಿಕವಾಗಿ ನನಗೆ ರವಿ ಪರಿಚಯಸ್ಥರು. ನನ್ನ ಒಳ್ಳೆಯ ಸ್ನೇಹಿತ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸಿ.ಟಿ. ರವಿಯರು ನನಗೆ ಕಳೆದ 15 ಕಳೆದ ಹತ್ತು ವರ್ಷಗಳಿಂದ ಪರಿಚಯಸ್ಥರು. ಈ ಅವಧಿಯಲ್ಲಿ ಅವರು ಯಾವತ್ತೂ ಮದ್ಯಪಾನ ಮಾಡಿದ್ದನ್ನು ನಾನು ಗಮನಿಸಿಲ್ಲ ಎಂದು ಸಚಿವ ಖಾದರ್ ಹೇಳಿದ್ದಾರೆ. ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ ಅವರು ಮದ್ಯಪಾನ ಮಾಡಿ, ಕಾರು ಚಲಾಯಿಸಿ, ಇಬ್ಬರು ಮೃತಪಡಲು ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪವನ್ನು ನಾನು ನಂಬುವುದಿಲ್ಲ ಎಂಬುವುದಾಗಿ ಕಾಂಗ್ರೆಸ್ ನ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಅಸ್ಪಷ್ಟ ಮಾಹಿತಿ ಇದ್ದರೆ ಆ ವಿಚಾರದ ಬಗ್ಗೆ ಮಾತನಾಡಬಾರದು. ಸುಖಾಸುಮ್ಮನೆ ಇನ್ನೊಬ್ಬರ ಮೇಲೆ ಆರೋಪ ಮಾಡಬಾರದು. ಅಪಘಾತದ ಸಂದರ್ಭದಲ್ಲಿ ಸಿ.ಟಿ. ರವಿ ಮದ್ಯಪಾನ ಮಾಡಲು ಸಾಧ್ಯವಿಲ್ಲ. ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಟಿರುವುದು ಬೇಸರದ ವಿಚಾರ. ಈ ಬಗ್ಗೆ ರವಿ ಜೊತೆ ಮಾತಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಫಾರ್ಚೂನರ್ ಕಾರು ಮಂಗಳವಾರ ನಸುಕಿನ ವೇಳೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಊರ್ಕೇನಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿಯಾಗಿ, ಯುವಕರಿಬ್ಬರು ಸಾವಿಗೀಡಾಗಿದ್ದರು.