ನವದೆಹಲಿ, ಫೆ 20(MSP): ಸ್ವೀಡನ್ ಮೂಲದ ಎರಿಕ್ಸನ್ ಕಂಪನಿಯೂ ತನಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ಕಂಪನಿಯೂ 550 ಕೋಟಿ ಬಾಕಿ ಹಣ ನೀಡಿಲ್ಲ ಎಂದು ಆರೋಪಿಸಿ ರಿಲಯನ್ಸ್ ಕಮ್ಯುನಿಕೇಶನ್ಸ್ ಕಂಪನಿಯ ಅಧ್ಯಕ್ಷ ಅನಿಲ್ ಅಂಬಾನಿ ಹಾಗೂ ರಿಲಯನ್ಸ್ ಕಂಪನಿಯ ಇಬ್ಬರು ನಿರ್ದೇಶಕರು ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದು, ಇದರ ವಿಚಾರಣೆ ಬುಧವಾರ ಸುಪ್ರೀಂಕೋರ್ಟ್ ನಲ್ಲಿ ನಡೆಯಿತು.
ಈ ಸಂದರ್ಭ ಪ್ರಕರಣದಲ್ಲಿ ರಿಲಯನ್ಸ್ ಕಮ್ಯುನಿಕೇಶನ್ಸ್ ಕಂಪನಿಯ ಅಧ್ಯಕ್ಷ ಅನಿಲ್ ಅಂಬಾನಿ ಹಾಗೂ ರಿಲಯನ್ಸ್ ಕಂಪನಿಯ ಇಬ್ಬರು ನಿರ್ದೇಶಕರು ತಪ್ಪಿತಸ್ಥರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಲ್ಲದೆ ಎರಿಕ್ಸನ್ ಇಂಡಿಯಾ ಕಂಪನಿಗೆ ನಾಲ್ಕು ತಿಂಗಳೊಳಗೆ 453 ಕೋಟಿ ಹಣ ಪಾವತಿ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದೆ. ಒಂದು ವೇಳೆ ನಿಗದಿತ ದಿನಾಂಕದೊಳಗೆ ಹಣ ಪಾವತಿ ಮಾಡದಿದ್ರೆ, ಪ್ರಕರಣದಲ್ಲಿ ತಪ್ಪಿತಸ್ಥರಾದ ಅನಿಲ್ ಅಂಬಾನಿ, ರಿಲಯನ್ಸ್ ಟೆಲಿಕಾಂ ಮುಖ್ಯಸ್ಥ ಸತೀಶ್ ಸೇತ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಮುಖ್ಯಸ್ಥ ಚಯ್ಯಾ ವಿರಾನಿ ಇವರು ಕನಿಷ್ಠ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದಿದೆ ಇದಲ್ಲದೆ ಸುಪ್ರೀಂಕೋರ್ಟ್ ಮೂವರಿಗೂ ತಲಾ 1 ಕೋಟಿ ದಂಡ ವಿಧಿಸಿದ್ದು ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಿದೆ.
ಎರಿಕ್ಸನ್ ಕಂಪನಿಯೂ, ’ನಮ್ಮ ಬಾಕಿ ಹಣ ನೀಡಲು ರಿಲಯನ್ಸ್ ಕಂಪನಿ ಬಳಿ ಹಣವಿಲ್ಲ ಆದರೆ ರಫೇಲ್ ವಿಮಾನ ಒಪ್ಪಂದದಲ್ಲಿ ಹೂಡಲು ಹಣವಿದೆ ’ ಎಂದು ಆರೋಪಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 13 ರಂದು ನ್ಯಾಯಮೂರ್ತಿ ಆರ್.ಎಫ್ ನಾರಿಮನ್ ಮತ್ತು ವಿನೀತ್ ಸರಣ್ ಅವರ ನ್ಯಾಯಪೀಠವು ಕಾಯ್ದಿರಿಸಿತ್ತು.