ಬೆಂಗಳೂರು,ಫೆ 20(MSP): ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಬಿಡದಿ ಪೊಲೀಸರು ಶಾಸಕ ಗಣೇಶ್ ಅವರನ್ನು ಹೊರರಾಜ್ಯದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರನ್ನು ರಾಮನಗರ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಜನವರಿ 20ರಂದು ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಅವರ ಮೇಲೆ ಅದೇ ಪಕ್ಷದ ಶಾಸಕ ಕಂಪ್ಲಿ ಗಣೇಶ್ ಹಲ್ಲೆ ನಡೆದಿದ್ದರು. ಪರಿಣಾಮ ಆನಂದ್ ಸಿಂಗ್ ಅವರ ಕಣ್ಣು, ಮುಖ, ತಲೆ ಹಾಗೂ ಕಿಬ್ಬೊಟ್ಟೆಗೆ ಗಾಯಗಳಾಗಿತ್ತು. ಅವರು ಬಳಿಕ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.
ಹಲ್ಲೆ ನಡೆಸಿದ್ದ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಬಂಧಿತ ಶಾಸಕರ ಇಂದು ಮಧ್ಯರಾತ್ರಿ ವೇಳೆ ಬೆಂಗಳೂರಿಗೆ ಕರೆತರಲಾಗುತ್ತದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.