ಚೆನ್ನೈ, ಫೆ 20(SM): ಲೋಕಸಭೆ ಚುನಾವಣೆಗೆ ಎಐಎಡಿಎಂಕೆ ಹಾಗೂ ಬಿಜೆಪಿ ಮಧ್ಯೆ ತಮಿಳುನಾಡಿನಲ್ಲಿ ಮೈತ್ರಿ ಅಂತಿಮಗೊಂಡಿದೆ. ಇದರ ಬೆನ್ನಲೇ, ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಒಪ್ಪಂದಕ್ಕೆ ಬಂದಿವೆ. ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
40 ಲೋಕಸಭಾ ಕ್ಷೇತ್ರಗಳ ಪೈಕಿ ತಮಿಳುನಾಡಿನಲ್ಲಿ 39 ಹಾಗೂ ಪುದುಚೆರಿಯಲ್ಲಿ 1 ಸ್ಥಾನವಿದೆ. ಅದರಲ್ಲಿ ಡಿಎಂಕೆ 25ರಿಂದ 28 ಸ್ಥಾನಗಳಲ್ಲಿ ಸ್ಪರ್ಧಿಸುವ ಭರವಸೆ ಇದೆ. ಉಳಿದ 16 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆ ಅವಕಾಶವನ್ನು ನೀಡಲಾಗಿದೆ. ಇನ್ನುಳಿದಂತೆ ಯಾವ ಯಾವ ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.
ತಮಿಳುನಾಡಿನಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್ ಗೆ ಒಂದೇ ಒಂದು ಸ್ಥಾನ ಗೆಲ್ಲಲು ಕೂಡ ಸಾಧ್ಯವಾಗಿರಲಿಲ್ಲ. ಇದೀಗ ಈ ಬಾರಿಯ ಲೋಕಸಭಾ ಸಮರದಲ್ಲಿ ಈ ಮೈತ್ರಿ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವುದೇ ಕುತೂಹಲದ ವಿಚಾರ.